ಮಂಗಳೂರು:- ಕಂಕನಾಡಿಯ ಮಸೀದಿ ಬಳಿಯ ರಸ್ತೆಯಲ್ಲಿ
ಮೇ 24 ರಂದು ನಮಾಜ್ ಮಾಡಿದ ಹಿನ್ನೆಲೆಯಲ್ಲಿ ಕದ್ರಿ ಪೊಲೀಸರು ಸ್ವಯಂ ಪ್ರೇರಿತವಾಗಿ (ಸುಮೋಟೊ) ದಾಖಲಿಸಿಕೊಂಡಿದ್ದ ಪ್ರಕರಣವನ್ನು ವಾಪಾಸ್ ಪಡೆಯಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ನಮಾಜ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಕ್ಷಣ ಕದ್ರಿ ಪೊಲೀಸರು ಸ್ವಯಂ ಪ್ರೇರಿತ (ಕಲಂ 341,283,143,149)ವಾಗಿ ಪ್ರಕರಣ ದಾಖಲಿಸಿದ್ದರು.ಇದಕ್ಕೆ ಕರಾವಳಿಯ ಮುಸ್ಲಿಂ ವಲಯ, ಪ್ರಗತಿಪರರು,ಜೊತೆಗೆ ದ ಕ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಸಾಮಾಜಿಕಜಾಲತಾಣದಲ್ಲಿ ಕಾಂಗ್ರೆಸ್ ಸರಕಾರ ಮತ್ತು ಪೋಲಿಸ್ ಇಲಾಖೆಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಕೆಲವರು ಸುಮೋಟೊ ಪ್ರಕರಣ ವಾಪಸ್ ಪಡೆಯಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಜೊತೆಗೆ ಹೋರಾಟದ ಎಚ್ಚರಿಕೆ ನೀಡಿದ್ದರು.
ಗುರುವಾರ ನಡೆದ ಬೆಳವಣಿಗೆಯಲ್ಲಿ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿದ್ದನ್ನು ಪೊಲೀಸರು ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಪೊಲೀಸ್ ಕಮಿಷನರ್ ಅವರಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಇವುಗಳ ಮಧ್ಯೆ ಭಜರಂಗದಳ ಪ್ರಮುಖರಾದ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದೆ.ಆದರೆ ಯಾವ ಪ್ರಕರಣಕ್ಕಾಗಿ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.