5,262 ಮತಗಳ ಮುನ್ನಡೆ ಕಾಯ್ದುಕೊಂಡ ಡಾ. ಸುಧಾಕರ್ – ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯಗೆ ನಿರಂತರವಾಗಿ ಹಿನ್ನಡೆ – ಕಾಂಗ್ರೆಸ್‌ನ 7 ಶಾಸಕರಿರುವ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮುನ್ನಡೆ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರ, ಬಾಗೇಪಲ್ಲಿ (ಗುಡಿಬಂಡೆ ತಾಲ್ಲೂಕು ಸೇರಿದಂತೆ) ವಿಧಾನಸಭಾ ಕ್ಷೇತ್ರ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರ, ದೇವನಹಳ್ಳಿ ವಿಧಾನಸಭಾ ಕ್ಷೇತ್ರ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ, ನೆಲಮಂಗಲ ವಿಧಾನಸಭಾ ಕ್ಷೇತ್ರ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ವಿಧಾನಸಭಾ ಕ್ಷೇತ್ರ ಹಾಗೂ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೊಬಳಿಯನ್ನು ಹೊಂದಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 4 ಜಿಲ್ಲೆಗಳಲ್ಲಿ ಒಟ್ಟು 19,81,347 ಮತದಾರರು ಇದ್ದಾರೆ. ಈ ಪೈಕಿ ಪುರುಷ ಮತದಾರರು 9,83,775, ಮಹಿಳಾ ಮತದಾರರು 9,97,306 ಹಾಗೂ ಇತರೆ ಮತದಾರರು 266 ಇದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 19,81,347 ಮತಗಳಲ್ಲಿ 15,25,717 ಮತಗಳು ಚಲಾವಣೆಯಾಗಿದೆ. ಅದರಲ್ಲಿ 7,66,348 ಪುರುಷ ಮತದಾರರು, 7,59,275 ಮಹಿಳಾ ಮತದಾರರು, 94 ಇತರೆ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಅಂದರೆ ಏಪ್ರಿಲ್ 26 ಶುಕ್ರವಾರದಂದು ನಡೆದಿದ್ದ ಮೊದಲ ಹಂತದ ಮತದಾನದಲ್ಲಿ ಶೇಕಡಾ 77 ರಷ್ಟು ಮತದಾನವಾಗಿತ್ತು.
ಇನ್ನು 2019ನೇ ಸಾಲಿನಲ್ಲಿ ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಎನ್. ಬಚ್ಚೇಗೌಡ ಗೆಲುವು ಸಾಧಿಸಿ 5 ವರ್ಷಗಳ ಕಾಲ ಸಂಸದರಾಗಿದ್ರು. ಇದೇ ಕ್ಷೇತ್ರದಿಂದ ಎಂ.ವಿ. ಕೃಷ್ಣಪ್ಪ, ವಿ. ಕೃಷ್ಣರಾವ್ 3 ಬಾರಿ, ಆರ್.ಎಲ್. ಜಾಲಪ್ಪ 3 ಬಾರಿ, ಡಾ. ಎಂ. ವೀರಪ್ಪ ಮೊಯ್ಲಿ 2 ಬಾರಿ ಗೆಲ್ಲುವುದರ ಮೂಲಕ ರಾಜ್ಯ ಹಾಗೂ ದೇಶದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ.
ಕ್ಷೇತ್ರದಲ್ಲಿ ಒಕ್ಕಲಿಗ, ಎಸ್ಸಿ-ಎಸ್ಟಿ, ಬಲಿಜ, ಮುಸ್ಲಿಂ, ಕುರುಬ ಸಮುದಾಯಗಳ ಪ್ರಭಾವ ಇದೆ. ಬಿ.ಎನ್ ಬಚ್ಚೇಗೌಡ ಹೊರತುಪಡಿಸಿದ್ರೆ ಬಹುತೇಕ ಪ್ರತಿ ಬಾರಿಯ ಚುನಾವಣೆಯಲ್ಲಿ ಒ.ಬಿ.ಸಿ ಹಾಗೂ ಮೈಕ್ರೋಸ್ಕೋಪಿಕ್ ಸಮುದಾಯದ ಕಾಂಗ್ರೆಸ್ ಮುಖಂಡರೇ ಸಂಸದರಾಗಿ ಆಯ್ಕೆ ಆಗಿರುವುದು ಇತಿಹಾಸ.
ಇನ್ನು ಈ ಬಾರಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಮಂತ್ರಿ ಡಾ.ಕೆ. ಸುಧಾಕರ್, ಕಾಂಗ್ರೆಸ್ ನಿಂದ ಶ್ರಿಮಂತ ಕುಟುಂಬದ ರಕ್ಷಾ ರಾಮಯ್ಯ ಸ್ಪರ್ಧೆಯಿಂದಾಗಿ ಪ್ರತಿಷ್ಠೆಯ ಕಣವಾಗಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾರರು ಸ್ಪಷ್ಟ ತೀರ್ಪು ನೀಡಿದ್ದಾರೆ.