ವಯನಾಡು ಮತ್ತು ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಸದ್ಯ ಬರೋಬ್ಬರಿ 1 ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿರುವ ರಾಹುಲ್ ಗಾಂಧಿ ಎರಡನೇ ಬಾರಿ ಇಲ್ಲಿಂದ ಕಣಕ್ಕೆ ಇಳಿದಿದ್ದಾರೆ. ಇನ್ನು ರಾಯ್‌ಬರೇಲಿಯಲ್ಲಿಯೂ ಮುನ್ನಡೆ ಕಾಯ್ದುಕೊಂಡಿದ್ದು, ಎರಡೂ ಕಡೆ ಗೆಲುವು ಸಾಧಿಸುವ ನಿರೀಕ್ಷೆ ಇದೆ. ವಯನಾಡಿನಲ್ಲಿ ಇಲ್ಲಿ ಸಿಪಿಐಯಿಂದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಆ್ಯನಿ ರಾಜಾ ಮತ್ತು ಬಿಜೆಪಿಯಿಂದ ಕೆ.ಸುರೇಂದ್ರನ್ ಸ್ಪರ್ಧಿಸುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡಿನಲ್ಲಿ ಸಿಪಿಐನ ಪಿ.ಪಿ.ಸುನೀರ್ ಅವರನ್ನು 4.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.
ವಯನಾಡಿನ ಜತೆಗೆ ರಾಹುಲ್ ಗಾಂಧಿ ಅವರು ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ರಾಯ್ ಬರೇಲಿ ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಖಾಲಿಯಾಗಿರುವ ರಾಯ್‌ಬರೇಲಿ ಕ್ಷೇತ್ರದಿಂದ ಮೊದಲಿಗೆ ಪ್ರಿಯಾಂಕಾ ಗಾಂಧಿ ವಾಧ್ರಾ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕೈ ಪಡೆ ರಾಹುಲ್ ಗಾಂಧಿ ಅವರನ್ನು ಕಣ್ಕಗಕ್ಕಿಳಿಸಿತ್ತು. ಸದ್ಯ ಈ ಲೆಕ್ಕಾಚಾರ ಕೈ ಹಿಡಿಯುವ ಲಕ್ಷಣ ಕಂಡು ಬಂದಿದೆ.