ಬೆಂಗಳೂರು: ಕರ್ನಾಟಕದ ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ವಿಧಾನಸೌಧಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು. ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ವೇಳೆ ಅನೇಕ ಸದಸ್ಯರು ಪಕ್ಷಾತೀತವಾಗಿ ಸಿಎಂ ಸಿದ್ದರಾಮಯ್ಯ ಕಾಲು ಮುಟ್ಟಿ ಆಶೀರ್ವಾದ ಪಡೆದರು.
ನೂತನ ಪರಿಷತ್ ಸದಸ್ಯರಿಗೆ ಸಭಾಪತಿ ಬಸವರಾಜ್ ಹೊರಟ್ಟಿ ಪ್ರಮಾಣ ವಚನ ಬೋಧಿಸಿದರು. ಬಿಜೆಪಿಯ ಪರಿಷತ್ ಸದಸ್ಯ ಸಿಟಿ ರವಿ ಕೇಸರಿ ಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಜೈ ಶ್ರೀರಾಮ್ ಎಂದು ಶಿಳ್ಳೆ ಕೇಕೆ ಹಾಕಿ ಬಿಜೆಪಿ ಸದಸ್ಯರು ಘೋಷಣೆ ಕೂಗಿ ಅಭಿನಂದಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನೇರವಾಗಿ ಸಿಎಂ ಸಿದ್ದರಾಮಯ್ಯ ಬಳಿ ಬಂದ ಸಿ.ಟಿ ರವಿ, ಸಿದ್ದರಾಮಯ್ಯ ಕಾಲು ಮುಟ್ಟಿ ನಮಸ್ಕರಿಸಿದರು. ಈ ವೇಳೆ ಸಿಟಿ ರವಿಯ ಕಿವಿ ಹಿಂಡಿದ ಸಿಎಂ ಬೆನ್ನು ತಟ್ಟಿ ಅಭಿನಂದಿಸಿದರು.
ನಂತರ ಭಾರತ ಮಾತೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನೂತನ ಪರಿಷತ್ ಸದಸ್ಯ ಎನ್ ರವಿಕುಮಾರ್ ಬಳಿಕ ಸಿಎಂ ಸಿದ್ದರಾಮಯ್ಯರ ಕಾಲು ಮುಟ್ಟಿ ಆಶೀರ್ವಾದ ಪಡೆದರು. ಮತ್ತೊಂದೆಡೆ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜೆಡಿಎಸ್ ಸದಸ್ಯ ಭೋಜೇಗೌಡ, ನಂತರ ಸಿಎಂ ಸಿದ್ದರಾಮಯ್ಯರ ಕಾಲು ಮುಟ್ಟಿ ಆಶೀರ್ವಾದ ಪಡೆದರು.
ಇತ್ತ ಭಗವಂತ ಹಾಗೂ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯತೀಂದ್ರ ಸಿದ್ದರಾಮಯ್ಯ, ಬಳಿಕ ಅಪ್ಪ ಸಿಎಂ ಸಿದ್ದರಾಮಯ್ಯರ ಕಾಲು ಮುಟ್ಟಿ ಆಶೀರ್ವಾದ ಪಡೆದರು. ಇದೇ ವೇಳೆ ನೂತನ ಸದಸ್ಯ ಕೆ ಗೋವಿಂದ ರಾಜ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಿಎಂ ಸಿದ್ದರಾಮಯ್ಯರ ಕಾಲು ಮುಟ್ಟಿ ಆಶೀರ್ವಾದ ಪಡೆದರು. ಜಗದೇವ್ ಗುತ್ತೆದಾರ್ ಅವರು ಬುದ್ಧ ಬಸವ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಸಭೆ, ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ 17 ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ಸಚಿವ ಎಚ್‌ಕೆ ಪಾಟೀಲ್ ಸೇರಿ ಹಲವರು ಭಾಗಿಯಾದರು. ಇದರೊಂದಿಗೆ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ 11 ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವೂ ನಡೆಯಿತು.
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ನೂತನ ಸದಸ್ಯರನ್ನು ಅಭಿನಂದಿಸಿದರು. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ 11 ಸದಸ್ಯರ ಪೈಕಿ ಕಾಂಗ್ರೆಸ್‌ನಿಂದ ಐವನ್ ಡಿಸೋಜಾ, ಕೆ ಗೋವಿಂದರಾಜು, ಜಗದೇವ್ ಗುತ್ತೆದಾರ್,ಬಲ್ಕಿಸ್ ಬಾನು, ಎನ್ ಎಸ್ ಭೋಸರಾಜ್, ಯತೀಂದ್ರ ಸಿದ್ದರಾಮಯ್ಯ, ಎ ವಸಂತ ಕುಮಾರ್, ಬಿಜೆಪಿಯಿಂದ ಎನ್ ರವಿಕುಮಾರ್, ಸಿಟಿ ರವಿ, ಮುಳೆ ಮಾರುತಿರಾವ್, ಜೆಡಿಎಸ್‌ನಿಂದ ಜವರಾಯಿಗೌಡ ಪ್ರಮಾಣ ವಚನ ಸ್ವೀಕರಿಸಿದರು.
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ 6 ಮಂದಿಯ ಪೈಕಿ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಚಂದ್ರಶೇಖರ್ ಬಸವರಾಜ್ ಪಾಟೀಲ್, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರಾಮೋಜಿಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಡಿ ಟಿ ಶ್ರೀನಿವಾಸ್, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದ ಡಾ ಧನಂಜಯ ಸರ್ಜಿ, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಎಸ್ ಎಲ್ ಭೋಜೇಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಕೆ ವಿವೇಕಾನಂದ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ವೇಳೆ ಬ್ಯಾಂಕ್ವೇಟ್ ಹಾಲ್ ಹೌಸ್ ಪುಲ್ ಆಗಿದ್ದು, ನೂತನ ಶಾಸಕರ ಸಂಬಂಧಿಕರು, ಬೆಂಬಲಿಗರಿಂದ ತುಂಬಿ ತುಳುಕುತ್ತಿತ್ತು.