ನವದೆಹಲಿ: 1989ರ ಐಎಫ್‌ಎಸ್ ಬ್ಯಾಚ್ ಅಧಿಕಾರಿ, ಚೀನಾಗೆ ಸಂಬಂಧಿಸಿದ ವಿಷಯಗಳಲ್ಲಿ ತಜ್ಞ ಎಂದೇ ಖ್ಯಾತರಾಗಿರುವ ವಿಕ್ರಮ್ ಮಿಸ್ರಿ ಅವರು ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ಹಾಲಿ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾಟ್ರಾ ಅವರ ಅವಧಿಯು ಜುಲೈ 14ರಂದು ಮುಗಿಯುವ ಕಾರಣ ವಿಕ್ರಮ್ ಮಿಸ್ರಿ ಅವರನ್ನು ನೇಮಿಸಲಾಗಿದೆ. ಜುಲೈ 15ರಂದು ವಿಕ್ರಮ್ ಮಿಸ್ರಿ ಅವರು ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ವಿನಯ್ ಕ್ವಾಟ್ರಾ ಅವರ ಅಧಿಕಾರದ ಅವಧಿಯನ್ನು ಆರು ತಿಂಗಳು ವಿಸ್ತರಣೆ ಮಾಡಲಾಗಿತ್ತು. ಅವರ ಅವಧಿಯು ಜುಲೈ 14ಕ್ಕೆ ಮುಗಿಯಲಿರುವ ಕಾರಣ ಕೇಂದ್ರ ಸರ್ಕಾರವು ನೂತನ ಕಾರ್ಯದರ್ಶಿಯನ್ನು ನೇಮಿಸಿದೆ. ವಿನಯ್ ಕ್ವಾಟ್ರಾ ಅವರನ್ನು ಅಮೆರಿಕಕ್ಕೆ ಭಾರತದ ರಾಯಭಾರಿಯನ್ನಾಗಿ ನೇಮಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ 1964ರ ನವೆಂಬರ್ 7ರಂದು ಜನಿಸಿದ ವಿಕ್ರಮ್ ಮಿಸ್ರಿ ಅವರು ಇತಿಹಾಸ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಜಮ್‌ಶೆಡ್‌ಪುರದಲ್ಲಿ ಎಂಬಿಎ ಅಧ್ಯಯನ ಮಾಡಿರುವ ಇವರು ಮೂವರು ಪ್ರಧಾನಿಗಳಿಗೆ ಖಾಸಗಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನರೇಂದ್ರ ಮೋದಿ, ಮನಮೋಹನ್ ಸಿಂಗ್ ಹಾಗೂ ಐ.ಕೆ. ಗುಜ್ರಾಲ್ ಅವರಿಗೆ ಕಾರ್ಯದರ್ಶಿಯಾಗಿದ್ದರು.
ಚೀನಾದ ಬೀಜಿಂಗ್‌ನಲ್ಲಿ ದೂತಾವಾಸ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇರುವ ವಿಕ್ರಮ್ ಮಿಸ್ರಿ ಅವರು ಚೀನಾ ವಿಷಯಕ್ಕೆ ಸಂಬಂಧಿಸಿದಂತೆ ಪರಿಣತ ಎನಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿಯೇ ಚೀನಾ ಬಗ್ಗೆ ಹೆಚ್ಚು ಗೊತ್ತಿರುವ, ಸಮಸ್ಯೆಗಳನ್ನು ನಿರ್ವಹಿಸುವ ಸಾಮರ್ಥ್ಯ ಇರುವ ಕೆಲವೇ ಅಧಿಕಾರಿಗಳಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.
ಭಾರತದ ಮಟ್ಟಿಗೆ ವಿದೇಶಾಂಗ ನೀತಿಯಲ್ಲಿ ಎದುರಾಗುವ ಪ್ರಮುಖ ಸವಾಲುಗಳಲ್ಲಿ ಚೀನಾದ ವಿಷಯವು ಒಂದಾಗಿದೆ. ಲಡಾಕ್ ಗಡಿಯಲ್ಲಿ ಯೋಧರು ಚೀನಾ ಸೈನಿಕರನ್ನು ಎದುರಿಸುವ ಜತೆಗೆ ರಾಜತಾಂತ್ರಿಕವಾಗಿಯೂ ಚೀನಾವನ್ನು ನಿಯಂತ್ರಿಸುವುದು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಪ್ರಮುಖ ಸಂಗತಿಯಾಗಿದೆ. ಹಾಗಾಗಿಯೇ, ವಿಕ್ರಮ್ ಮಿಸ್ರಿ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ.