ಪುತ್ತೂರು: ಮುಂಜಾಗೃತ ಕ್ರಮವಾಗಿ ಚೆಲ್ಯಡ್ಕ ಸೇತುವೆ ಮೇಲೆ ಘನ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದು ಈ ಹಿನ್ನೆಲೆಯಲ್ಲಿ ಸೇತುವೆ ಮೇಲೆ ಬಸ್ಸು ಸಂಚಾರ ಇಲ್ಲದೇ ಇರುವುದರಿಂದ ಈ ಭಾಗದ ಬಹಳಷ್ಟು ಶಾಲಾ,ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ, ಕೂಲಿ ಕೆಲಸಕ್ಕೆ ಹೋಗುವ ಬಡ ಕಾರ್ಮಿಕರಿಗೆ ತೊಂದರೆಯಾಗಿದೆ.
ಆದ್ದರಿಂದ ವಿದ್ಯಾರ್ಥಿಗಳ ಹಾಗೂ ಬಡ ನಾಗರೀಕರ ಅನುಕೂಲಕ್ಕಾಗಿ ಬೆಳಿಗ್ಗೆ ಹಾಗೂ ಸಂಜೆ ನಿಗದಿತ ಸಮಯದಲ್ಲಿ ಪ್ರಯಾಣಿಕರ ವಾಹನಗಳನ್ನು ಅದರಲ್ಲೂ ಬಸ್ಸು ಸಂಚಾರಕ್ಕೆ ಅವಕಾಶ ನೀಡುವಂತೆ ಒಳಮೊಗ್ರು ಗ್ರಾಮ ಬಿಜೆಪಿ ವತಿಯಿಂದ ಜು.2 ರಂದು ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರರವರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್‌ಟಿ ಮೋರ್ಛಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಒಳಮೊಗ್ರು ಬಿಜೆಪಿ ಶಕ್ತಿಕೇಂದ್ರ ಸಂಚಾಲಕ ರಾಜೇಶ್ ರೈ ಪರ್ಪುಂಜ, ಬೂತ್ ಸಮಿತಿ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಪಂಚಾಯತ್ ಸದಸ್ಯರಾದ ಪ್ರದೀಪ್, ಮಹೇಶ್ ರೈ ಕೇರಿ ಉಪಸ್ಥಿತರಿದ್ದರು.
ಚೆಲ್ಯಡ್ಕ ಸೇತುವೆ ಮೇಲೆ ಪೂರ್ಣ ಪ್ರಮಾಣದಲ್ಲಿ ಘನ ವಾಹನ ಸಂಚಾರ ನಿಷೇಧಿಸಿರುವುದರಿಂದ ಗ್ರಾಮಸ್ಥರು ಕೂಲಿಗಾಗಿ ದುಡಿಯಲು ಹೋಗುವವರು ಹಾಗೂ ಈ ಭಾಗದ ನೂರಾರು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಶಾಲಾ ಕಾಲೇಜಿಗೆ ಹೋಗಲು ಅಸಾಧ್ಯವಾಗಿದೆ. ತಾವು ಈಗಾಗಲೇ ಪರ್ಯಾಯ ವ್ಯವಸ್ಥೆ ಸೂಚಿಸಿದ್ದರೂ ಅದು ಅಸಮರ್ಥಕವಾಗಿದೆ. ಆದ್ದರಿಂದ ತಮ್ಮ ಆದೇಶವನ್ನು ಪುನರ್ ಪರಿಶೀಲನೆ ಮಾಡಿ ಈ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದೆ ಎಂದು ಮನವಿಯನ್ನು ತಿಳಿಸಲಾಗಿದೆ.
ಸದ್ಯ ಸೇತುವೆ ಮೇಲೆ ಅಧಿಕ ಭಾರದ ಸರಕು ಸಾಗಾಣಿಕೆ ವಾಹನಗಳ ಓಡಾಟವನ್ನು ನಿಷೇಧ ಮಾಡಿದ್ದು ಇದನ್ನು ಬೇಕಾದರೆ ಮುಂದುವರಿಸಿ ಆದರೆ ಬಸ್ಸು ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ. ಬಸ್ಸು ಓಡಾಟವೂ ಸಾಧ್ಯವಾಗದೇ ಇದ್ದರೆ ಪರ್ಯಾಯ ವ್ಯವಸ್ಥೆಯಾಗಿ ಕೆಎಸ್‌ಆರ್‌ಟಿಸಿಯಿಂದ 4 ಬಸ್ಸುಗಳನ್ನು ಪುತ್ತೂರಿನಿಂದ ಗುಮ್ಮಟೆಗದ್ದೆ ಹಾಗೂ ಚೆಲ್ಯಡ್ಕದಿಂಧ ಪಾಣಾಜೆ, ಗುಮ್ಮಟೆಗದ್ದೆಯಿಂದ ಪುತ್ತೂರು ಪಾಣಾಜೆಯಿಂದ ಚೆಲ್ಯಡ್ಕಕ್ಕೆ ತಾತ್ಕಾಲಿಕವಾಗಿ ಓಡಾಟ ನಡೆಸುವಂತೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.