ವಯನಾಡಿನಲ್ಲಿ 100 ಮನೆಗಳನ್ನು ಕಟ್ಟಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಶಿರೂರು ದುರಂತದಿಂದ ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾರವಾರದಲ್ಲಿ ಪ್ರಣವಾನಂದ ಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಕೇವಲ 1 ಲಕ್ಷದ 20 ಸಾವಿರ ಹಣ ಮಾತ್ರ ಕೊಡಲಾಗುತ್ತಿದೆ. ವಯನಾಡು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ಕ್ಷೇತ್ರ. ರಾಹುಲ್ ಗಾಂಧಿಯ ಓಲೈಕೆ ಮಾಡಲು ಮನೆ ಕಟ್ಟಿಕೊಡಲು ಮುಂದಾಗಿದೆ. ಆದ್ರೆ ರಾಜ್ಯದ ಜನರಿಗೆ ಮಾತ್ರ 1 ಲಕ್ಷ 20 ಸಾವಿರ ಪರಿಹಾರ ಕೊಡ್ತಾರೆ. ಬೇರೆ ರಾಜ್ಯದ ಜನ ಸಮಸ್ಯೆಯಲ್ಲಿದ್ದಾಗ ಪರಿಹಾರ ಕೊಡುವುದು ತಪ್ಪಲ್ಲ. ಆದರೆ ತಮ್ಮ ಪಕ್ಷದ ನಾಯಕನ ಮುಖ ನೋಡಿ ಪರಿಹಾರ ಕೊಡುವ ಇವರಿಗೆ ನಮ್ಮ ರಾಜ್ಯದ ಜನ ಬೀದಿ ಪಾಲಾಗಿರುವುದು ಕಣ್ಣಿಗೆ ಕಾಣುವುದಿಲ್ಲವೆ? ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಯಾಕೆ ಮನೆ ಕಟ್ಟಿ ಕೊಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಪ್ರಣವಾನಂದ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಅಧಿವೇಶನದ ಉದ್ದಕ್ಕೂ ಆರೋಪ ಪ್ರತ್ಯಾರೋಪ ಆಯ್ತು. ಆದ್ರೆ ಒಂದೇ ಒಂದು ಬಾರಿಯೂ ಶಿರೂರು ಬಗ್ಗೆ ವಿಶೇಷ ಚರ್ಚೆ ಆಗಲಿಲ್ಲ. ಶಿರೂರು ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸುವ ಕೆಲಸವು ಆಗಲಿಲ್ಲ. ರಾಜ್ಯ ಸರ್ಕಾರ ತಮ್ಮ ಜವಾಬ್ದಾರಿಯನ್ನು ಮರೆತು ಕೆಲಸ ಮಾಡುತ್ತಿದೆ. ವಿಪಕ್ಷಗಳು ಸಹಿತ ಶಿರೂರು ದುರಂತದ ಬಗ್ಗೆ ಧ್ವನಿ ಎತ್ತಲಿಲ್ಲ. ರಾಜ್ಯದ ಜನಪ್ರತಿನಿಧಿಗಳ ನಡೆ ನೋಡಿ ಅಸಹ್ಯ ಆಗುತ್ತದೆ ಎಂದು ಕಿಡಿಕಾರಿದ್ದಾರೆ.