ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಕೊನೆಗೂ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಸುದೀರ್ಘ ವಾದ, ಪ್ರತಿವಾದ ಆಲಿಸಿದ್ದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ತೀರ್ಪು ಪ್ರಕಟಿಸಿದ್ದು, ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಸಿಎಂ ವಿರುದ್ಧ ಖಾಸಗಿ ದೂರುದಾರರೇ ಅನುಮತಿ ಕೋರಬಹುದು. ಸಂವಿಧಾನದ ವಿಧಿ ‘17 ಎ’ ಅಡಿ ಅನುಮತಿ ಕೋರಿದ್ದು ಸರಿಯಾಗಿದೆ. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಸರಿಯಾಗಿದೆ. ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ‘17 ಎ’ ಅಡಿಯ ಆದೇಶ ಸಮರ್ಪಕವಾಗಿದೆ ಎಂದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಸಿಎಂ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿದರು.
ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ 6 ದಿನಗಳ ಸುದೀರ್ಘ ವಾದ ಮಂಡನೆ ಆಲಿಸಿತ್ತು. ಸಿಎಂ ಸಿದ್ದರಾಮಯ್ಯ ಪರ ವಕೀಲರು, ಸಾಲಿಸಿಟರ್ ಜನರಲ್ ಹಾಗೂ ದೂರುದಾರರ ಪರ ವಕೀಲರು ಸುದೀರ್ಘ ವಾದ ಮಂಡನೆ ಮಾಡಿದ್ದರು.
ನ್ಯಾಯಾಲಯದಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ಸುಪ್ರೀಂಕೋರ್ಟ್ನ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಹಾಗೂ ಪ್ರೊ.ರವಿಕುಮಾರ್ ವರ್ಮಾ ಅವರು ವಾದ ಮಂಡನೆ ಮಾಡಿದರು. ಇನ್ನು ರಾಜ್ಯಪಾಲರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ್ದ ನ್ಯಾ.ಎಂ ನಾಗ ಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಪ್ರಕರಣ ತನಿಖೆ ಆಗಬೇಕು ಎಂದು ಹೇಳಿದ್ದಾರೆ. ಪ್ರಸ್ತುತ ವಿಚಾರ ರಾಜಕೀಯದಲ್ಲಿ ಬುಡಮೇಲು ಮಾಡುವ ಪರಿಸ್ಥಿತಿ ಎದ್ದು ಕಾಣುತ್ತಿದೆ.