ಬೆಂಗಳೂರು: ಕ್ಯಾಬ್ ಡ್ರೈವರ್‌ನಿಂದ ಲೈಂಗಿಕ ಕಿರುಕುಳಕ್ಕೆ ಸಂತ್ರಸ್ತೆಗೆ 5 ಲಕ್ಷ ರೂಪಾಯಿ ಪರಿಹಾರ ಮತ್ತು ವ್ಯಾಜ್ಯ ವೆಚ್ಚಕ್ಕಾಗಿ 50,000 ರೂಪಾಯಿ ನೀಡುವಂತೆ ಕರ್ನಾಟಕ ಹೈಕೋರ್ಟ್ ಎಎನ್‌ಐ ಟೆಕ್ನಾಲಜೀಸ್ (ಓಲಾ) ಹಾಗೂ ಅದರ ಆಂತರಿಕ ದೂರು ಸಮಿತಿ (ಐಸಿಸಿ) ಗೆ ನಿರ್ದೇಶನ ನೀಡಿತು.
ಪ್ರಕರಣ ಸಂಬಂಧ ನೀಡಿರುವ ದೂರಿನ ಕುರಿತು ತನಿಖೆ ನಡೆಸಲು ಕಂಪನಿಯ ಆಂತರಿಕ ದೂರು ಸಮಿತಿಗೆ ನಿರ್ದೇಶಿಸಬೇಕು ಎಂದು ಕೋರಿ ಸಂತ್ರಸ್ತ ಯುವತಿ ಸಲ್ಲಿಸಿದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ ತೀರ್ಪನ್ನು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಏಕಸದಸ್ಯ ಪೀಠ ಪ್ರಕಟಿಸಿದೆ. ಅರ್ಜಿದಾರರು 2019 ರಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು ಮತ್ತು ಚಾಲಕನ ವಿರುದ್ಧ ಕ್ರಮ ಕೋರಿ ಎಎನ್‌ಐ ಟೆಕ್ನಾಲಜೀಸ್‌ಗೆ ನೀಡಿದ ದೂರನ್ನು ಸಂಸ್ಥೆ ಪರಿಗಣಿಸಲಿಲ್ಲ. ಆಂತರಿಕ ದೂರುಗಳ ಸಮಿತಿಯು ಈ ವಿಷಯದ ಬಗ್ಗೆ ವಿಚಾರಣೆ ನಡೆಸುವ ಅಧಿಕಾರವನ್ನು ಹೊಂದಿಲ್ಲಎಂಬ ಬಾಹ್ಯ ಕಾನೂನು ಸಲಹೆಗಾರರ ಹೇಳಿಕೆಯನ್ನು ತಿರಸ್ಕರಿಸಿತ್ತು. ಹಾಗಾಗಿ, ಅವರು ಹೈಕೋರ್ಟ್ ಮೊರೆ ಹೋಗಿದ್ದರು.
2016ರ ಅಗ್ರಿಗೇಟರ್ ನಿಯಮಗಳ ಅಡಿಯಲ್ಲಿ ಕಡ್ಡಾಯವಾಗಿ ಪರವಾನಗಿಯನ್ನು ನವೀಕರಿಸದೆ ಓಲಾಗೆ ಟ್ಯಾಕ್ಸಿ ನಡೆಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ತಮ್ಮ 1 ಲಕ್ಷ ರೂಪಾಯಿ ಪಾವತಿಸುವಂತೆ ಸಾರಿಗೆ ಹೆಚ್ಚುವರಿ ಆಯುಕ್ತರು ಮತ್ತು ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗೆ ನ್ಯಾಯಾಲಯ ಸೂಚಿಸಿದೆ. ವಿವರಣೆಯನ್ನು ಕೋರಿ ಆಗಸ್ಟ್ 16, 2024 ರ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ವಿಷಯವನ್ನು ಮುಂದುವರಿಸಲು ಮತ್ತು 90 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು” ಎಂದೂ ನ್ಯಾಯಾಲಯ ಸೂಚನೆ ನೀಡಿದೆ.
ಮಾನ್ಯವಾದ ಪರವಾನಗಿ ಇಲ್ಲದೆ ಓಲಾ ತನ್ನ ವ್ಯವಹಾರವನ್ನು ನಡೆಸುತ್ತಿರುವುದು ವಿವರಿಸಲಾಗದ ಸಂಗತಿಯಾಗಿದೆ. ಸಾರಿಗೆ ಪ್ರಾಧಿಕಾರದ ಸೂಚನೆಯು ಕಣ್ಣೊರೆಸುವ ಸಂಗತಿಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಸಾರಿಗೆ ಪ್ರಾಧಿಕಾರ ಮತ್ತು ಉಸ್ತುವಾರಿ ಅಧಿಕಾರಿಗಳು ತಮ್ಮ ಶಾಸನಬದ್ಧ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಉದ್ದೇಶಪೂರ್ವಕ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯ ತೋರಿದ್ದಾರೆ. ಇಬ್ಬರು ಸಮಾನ ತಪ್ಪಿತಸ್ಥರು ಎಂದು ಕೋರ್ಟ್ ತಿಳಿಸಿದೆ.
ಸಂತ್ರಸ್ತೆ ಆಗಸ್ಟ್ 23, 2018 ರಂದು ಯಲಹಂಕದ ತನ್ನ ಮನೆಯಿಂದ ಜೆಪಿ ನಗರದಲ್ಲಿರುವ ತನ್ನ ಕಚೇರಿಗೆ ಕ್ಯಾಬ್ ಹತ್ತಿದ ನಂತರ, ಚಾಲಕ ತನ್ನ ಫೋನ್‌ನಲ್ಲಿ ಪೋರ್ನ್ ವೀಡಿಯೊವನ್ನು ವೀಕ್ಷಿಸಿದನು. ವೀಡಿಯೊ ಅವಳಿಗೂ ಕಾಣಿಸುವಂತೆ ಉದ್ದೇಶಪೂರ್ವಕವಾಗಿ ಫೋನ್ ಹಿಡಿದಿದ್ದಾನೆ. ಜೊತೆಗೆ ಆಕೆಯ ಎದುರೇ ಹಸ್ತಮೈಥುನ ಮಾಡಿಕೊಂಡಿದ್ದ. ಸಂತ್ರಸ್ತೆ ವಾಹನವನ್ನು ನಿಲ್ಲಿಸುವಂತೆ ಚಾಲಕನಿಗೆ ಪದೇ ಪದೇ ವಿನಂತಿಸಿದರೂ ಆಕೆಯ ಮನವಿಗೆ ಕಿವಿ ಗೊಡದ ಆತ ಕಚೇರಿಯ ಬಳಿ ಇಳಿಸಿದ್ದನು.