ಮಂಗಳೂರು ಇಲ್ಲಿ ಸೆ.18ರಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷಾ ಸ್ಥಾನಮಾನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.
ಸತತ ಮೂರು ಗಂಟೆಗಳ ಕಾಲ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
“ಹಿಂದಿನ ಸರ್ಕಾರಗಳು ಯಾಕೆ ಮಾಡಲಿಲ್ಲ ಅಂತ ನಾನು ಪ್ರಶ್ನೆ ಮಾಡುವುದಿಲ್ಲ. ನಮಗೆ ಬದ್ಧತೆ ಇದೆ. ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ. ನಾವು ಬದುಕಿನ ಮೇಲೆ ಮಾಡುತ್ತೇವೆ” ಎಂದು ಸಿಎಂ ಹೇಳಿದರು.
“ಯು.ಟಿ. ಖಾದರ್ ಅವರು ಸ್ಪೀಕರ್ ಆಗಿದ್ದರು. ಅವರು ಮೊದಲ ಪ್ರಶ್ನೆ ಎತ್ತಿದ್ದೇ ತುಳು ಭಾಷೆಯ ಬಗ್ಗೆ. ಅವರೊಬ್ಬರಿಗೆ ಅಲ್ಲ, ಈ ಬಗ್ಗೆ ಬೇಡಿಕೆ ಇಟ್ಟಿದ್ದ ಎಲ್ಲರಿಗೂ ನಾನು ಅಭಿನಂದಿಸುತ್ತೇನೆ” ಎಂದರು.
ಕರಾವಳಿ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ನಡೆದಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ತುಳು ಮಾತೃಭಾಷಿಗರಾಗಿದ್ದಾರೆ. ಈ ಮೂಲಕ ಸರ್ಕಾರ ಭಾವನಾತ್ಮಕ ವಿಚಾರಕ್ಕೂ ಮನ್ನಣೆ ನೀಡಿದೆ.
























