ಪುತ್ತೂರು: ಸಂಪ್ಯದಲ್ಲಿ 2019ರ ಸೆಪ್ಟೆಂಬರ್ 3ರಂದು ಗಣೇಶೋತ್ಸವದ ಪೆಂಡಾಲ್‌ನಲ್ಲಿ ನಡೆದಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಅವರ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಮೇಲಿನ ಕೊಲೆ ಆರೋಪಗಳು ಸಾಬೀತಾಗಿವೆ.
ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಆರೋಪಿಗಳಾದ ಕಿರಣ್ ಹಾಗೂ ಪ್ರೀತೇಶ್ ಅವರ ಮೇಲಿನ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ತೀರ್ಮಾನಿಸಿದೆ. ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರು ತೀರ್ಪು ಪ್ರಕಟಿಸಿದ್ದು, ಇಬ್ಬರು ಆರೋಪಿಗಳಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಸೆಪ್ಟೆಂಬರ್ 22ರಂದು ಪ್ರಕಟಿಸಲಿದ್ದಾರೆ.ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜಯಂತಿ ಸತೀಶ್ ಭಟ್ ವಾದ ಮಂಡಿಸಿದ್ದರು.
ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಹೋದರರಾದ ಚರಣ್‌ರಾಜ್ ಮತ್ತು ಕಿರಣ್, ಪ್ರೀತೇಶ್ ಹಾಗೂ ಸ್ಟೀವನ್ ಮೊಂತೇರೊ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು. ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಎದುರಿಸಿದ್ದ ಸ್ಟೀವನ್ ಮೊಂತೇರೊ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಇನ್ನು ಪ್ರಕರಣದ ಎರಡನೇ ಆರೋಪಿ ಚರಣ್‌ರಾಜ್ ಅವರನ್ನು 2022ರ ಜೂನ್ 4ರಂದು ಪೆರ್ಲಂಪಾಡಿಯಲ್ಲಿ ಮತ್ತೊಂದು ತಂಡ ತಲ್ವಾರ್‌ನಿಂದ ಹತ್ಯೆ ಮಾಡಿತ್ತು. ಈ ಹತ್ಯೆ ಕಾರ್ತಿಕ್ ಮೇರ್ಲ ಕೊಲೆಗೆ ಪ್ರತೀಕಾರವಾಗಿ ನಡೆದಿರುವ ಸಾಧ್ಯತೆಯೂ ಅಂದು ಚರ್ಚೆಯಾಗಿತ್ತು.
ಪ್ರಸ್ತುತ ಪ್ರಕರಣದ ವಿಚಾರಣೆಯಲ್ಲಿ ಮೂವರು ಪ್ರತ್ಯಕ್ಷದರ್ಶಿಗಳಾದ ಕೇಶವ ಸುವರ್ಣ, ಪವನ್ ಹಾಗೂ ಶ್ರೀಕಾಂತ್ ಅವರ ಸಾಕ್ಷ್ಯ ಪ್ರಮುಖವಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ FSL ವರದಿ ಸೇರಿದಂತೆ ವೈಜ್ಞಾನಿಕ ಸಾಕ್ಷ್ಯಗಳನ್ನು ಕೂಡ ನ್ಯಾಯಾಲಯ ಪರಿಗಣಿಸಿದೆ.
ಇದೀಗ ಇಬ್ಬರು ಆರೋಪಿಗಳ ಮೇಲಿನ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 22ರಂದು ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.
























