ದಾಳಿಗೆ ಗಾಯಗೊಂಡಿದ್ದ 11 ಮಂದಿ ಭಾರತೀಯರ ಪೈಕಿ ಉಮ್ರಾ ಯಾತ್ರೆಗೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದ ಓರ್ವ ಭಾರತೀಯ ವ್ಯಕ್ತಿ ಸಾವನ್ನಪ್ಪಿದ್ದಾನೆ.
ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಮ್ಮ X ಖಾತೆಯ ಮೂಲಕ ಅಧಿಕೃತ ಮಾಹಿತಿ ನೀಡಿದೆ. ಅ.10ರಂದು ಸೌದಿ ಅರೇಬಿಯಾದ ಮೇಲೆ ನಡೆದ ದಾಳಿಯ ಅಪ್ಡೇಡ್ ಎಂಬ ಶೀರ್ಷಿಕೆಯಡಿ ಮಾಹಿತಿ ನೀಡಿದ್ದು,ಈ ಹೇಳಿಕೆಯ ಪ್ರಕಾರ, “ಅ.10 ರಂದು ರಿಯಾದ್ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯ ಕುರಿತು ನವೀಕರಣ. ರಿಯಾದ್ ದಾಳಿಯಲ್ಲಿ ಗಾಯಗೊಂಡಿದ್ದ ಒಬ್ಬ ಭಾರತೀಯ ಪ್ರಜೆ ಇಂದು ದುರದೃಷ್ಟವಶಾತ್ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರ ಕುಟುಂಬಕ್ಕೆ ನಮ್ಮ ಹೃತ್ಪೂರ್ವಕ ಸಂತಾಪಗಳನ್ನು ತಿಳಿಸುತ್ತೇವೆ. ನಾವು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಮೃತದೇಹಗಳನ್ನು ಶೀಘ್ರವಾಗಿ ಸ್ವದೇಶಕ್ಕೆ ತಲುಪಿಸಲು ಎಲ್ಲಾ ಬೆಂಬಲವನ್ನು ನೀಡುತ್ತೇವೆ” ಎಂದು ತಿಳಿಸಿದೆ.
ಭಾರತದ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಸಹ ತಮ್ಮ X ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿದ್ದು, “ರಿಯಾದ್ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿರುವುದು ತೀವ್ರ ದುಃಖ ತಂದಿದೆ. ಮೃತರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ರಾಯಭಾರ ಕಚೇರಿಯು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ” ಎಂದು ತಿಳಿಸಿದ್ದಾರೆ.
ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅ.10ರಂದು ಹೌತಿ ದಾಳಿ ನಡೆಸಿದ್ದು, ಈ ಭೀಕರ ಕ್ಷಣ ಸಿಸಿಟಿವಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ವಿಮಾನ ನಿಲ್ದಾಣದಲ್ಲಿ ಉಮ್ರಾ ಯಾತ್ರಿಕರು ತಮ್ಮ ವಿಮಾನಗಳನ್ನು ಹತ್ತಲು ತಯಾರಿ ನಡೆಸುತ್ತಾ, ಕಾಯುತ್ತಾ ಕುಳಿತಿದ್ದಾರೆ. ಇಲ್ಲಿ ಹಲವು ಪ್ರಯಾಣಿಕರು ವೇಯಿಟಿಂಗ್ ಏರಿಯಾ ಸೇರಿದಂತೆ ವಿಮಾನ ನಿಲ್ದಾಣದ ಹಲವು ಭಾಗಗಳಲ್ಲಿ ತಮ್ಮ ವಿಮಾನವನ್ನು ಬೋರ್ಡ್ ಮಾಡುವ ಸಮಯಕ್ಕಾಗಿ ಕಾಯುತ್ತಿರುವ ದೃಶ್ಯಗಳನ್ನು ತೋರಿಸಿದೆ. ಈ ವೇಳೆ, ಕ್ಷಣಮಾತ್ರದಲ್ಲೇ ಹಠಾತ್ತನೇ ಕ್ಷಿಪಣಿ ಈ ಜಾಗಕ್ಕೆ ಅಪ್ಪಳಿಸಿದ್ದು ದೊಡ್ಡದಾಗಿ ಕತ್ತಳೆ ಬಣ್ಣದ ಬೆಂಕಿ ಸ್ಪೋಟಗೊಂಡಿದೆ. ದಾಳಿಯ ಪರಿಣಾಮವಾಗಿ ಏರ್‌ಪೋರ್ಟ್‌ನ ಛಾವಣಿ ಭಾಗಗಳು ಪ್ರಯಾಣಿಕರ ಮೇಲೆಯೇ ಕುಸಿದು ಬಿದ್ದಿದೆ. ಈ ವೇಳೆ ಪ್ರಯಾಣಿಕರು ತಮ್ಮ ಜೀವ ಉಳಿಸಿಕೊಳ್ಳಲು ಅಲ್ಲಿಂದ ಪಾರಾಗಲು ಓಡುತ್ತಿರುವ ಭೀಕರ ದೃಶ್ಯ ಕಂಡುಬಂದಿದೆ.
ಹೌತಿ ದಾಳಿಗಳ ನಡುವೆ ಸೌದಿ ಅರೇಬಿಯಾದಲ್ಲಿನ ಎಲ್ಲಾ ಭಾರತೀಯ ಪ್ರಜೆಗಳಿಗೆ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಚ್ಚರಿಕೆಯ ಸಲಹೆ ನೀಡಿ ಪ್ರಕಟಣೆ ಹೊರಡಿಸಿದೆ.
- ಭಾರತೀಯರು ದಾಳಿಯ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಓಡಾಟ ನಡೆಸದಂತೆ ಆದಷ್ಟು ಒಳಾಂಗಣ ಪ್ರದೇಶಗಳಲ್ಲೇ ಇರುವಂತೆ ಹಾಗೂ ಅಲ್ಲಿನ ಸ್ಥಳೀಯ ಅಧಿಕಾರಿಗಳು ನೀಡುವ ಸೂಚನೆಗಳನ್ನು ಪಾಲಿಸುಂತೆ ಸೂಚಿಸಿದೆ.
- ಪ್ರಸ್ತುತ ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತಂತೆ ಯಾವುದೇ ರೀತಿಯ ಸುದ್ದಿ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುವುದು ಸೇರಿದಂತೆ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದೆ.
- ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗು ಜೆಡ್ಡಾ ಕಾನ್ಸುಲೇಟ್ ಸೇರಿದಂತೆ ಅದರ VFS ಸೇವೆಗಳು ಎಂದಿನಂತೆ ಲಭ್ಯವಿರಲಿದ್ದು, ಇದರ ಮೂಲಕ ಆಪ್ಡೇಟ್ ಹಾಗೂ ಸಲಹೆಗಳನ್ನು ನೀಡಲಾಗುವುದು ಎಂದು ತಿಳಿಸಿದೆ.
- ಭಾರತೀಯ ರಾಯಭಾರ ಕಚೇರಿಗಳನ್ನು ಸಂಪರ್ಕಿಸಲು 24/7 ಟೋಲ್ ಫ್ರಿ ನಂಬರ್ 8002471234 ಅನ್ನು ಬಳಸುವಂತೆ ಸೂಚಿಸಿದೆ. ಜೊತೆಗೆ ಭಾರತೀಯ ರಾಯಭಾರ ಕಚೇರಿಯ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಾಗುವುದು.
ಭಾನುವಾರವೂ ಸಹ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ವಿಮಾನ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳನ್ನು ಗುರಿಯಾಗಿಸಿ ತಮ್ಮ ಕ್ಷಿಪಣಿ ದಾಳಿಯನ್ನು ಮುಂದುವರೆಸಿದೆ. ಈ ಕುರಿತು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಮಾಹಿತಿ ನೀಡಿದ್ದು, ಅಧಿಕಾರಿಗಳು ಹಾನಿಯನ್ನು ನಿರ್ಣಯಿಸುತ್ತಿದ್ದಾರೆ ಮತ್ತು ವಿಮಾನ ನಿಲ್ದಾಣದ ಸೌಲಭ್ಯಗಳ ಸುರಕ್ಷತೆಯನ್ನು ಪರಿಶೀಲಿಸುತ್ತಿದ್ದಾರೆ. ದಾಳಿಯ ಹಿನ್ನಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದಾಗಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ತಿಳಿಸಿದೆ.
ಇತ್ತ, ಹೌತಿಗಳು ಸಹ ಇನ್ನೂ ಸೌದಿಯ ವಿಮಾನ ನಿಲ್ದಾಣಗಳ ಟಾರ್ಗೆಟ್ ಹೆಚ್ಚಿಸುತ್ತೇವೆ ಎಂದಿದ್ದು, ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣದ ಕೆಲಸಗಾರರು ಮತ್ತು ಪ್ರಯಾಣಿಕರಿಗೆ ಸೌದಿ ವಿಮಾನ ನಿಲ್ದಾಣಗಳನ್ನು ಬಳಸದಂತೆ ವಾರ್ನಿಂಗ್ ನೀಡಿದ್ದಾರೆ

























