ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದಂದು ವಿಶೇಷ ಉಡುಗೊರೆ ಕೊಡೋದಾಗಿ ‘ಟಾಕ್ಸಿಕ್’ ತಂಡ ಈ ಮೊದಲೇ ಘೋಷಣೆ ಮಾಡಿತ್ತು. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಅಂತೆಯೇ ಇಂದು (ಜನವರಿ 8) ಬೆಳಿಗ್ಗೆ 10 ಗಂಟೆ 25 ನಿಮಿಷಕ್ಕೆ ‘ಟಾಕ್ಸಿಕ್’ ಗ್ಲಿಂಪ್ಸ್ ರಿಲೀಸ್ ಆಗಿದೆ. ಯಶ್ ಅವರ ಚಿತ್ರದ ಮೇಲಿರುವ ನಿರೀಕ್ಷೆ ಈಗ ದ್ವಿಗುಣವಾಗಿದೆ. ಯಶ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಯಶ್ ಅವರು ರೆಟ್ರೋ ಕಾರಲ್ಲಿ ಸ್ಟೈಲಿಶ್ ಆಗಿ ಕ್ಲಬ್ ಒಂದಕ್ಕೆ ಎಂಟ್ರಿ ಕೊಡುತ್ತಾರೆ. ಅವರು ಒಳಗೆ ಬರುತ್ತಿರುವಾಗ ಅಲ್ಲಿ ಎಲ್ಲರೂ ಮೋಜಿನಲ್ಲಿ ತೇಲುತ್ತಾ ಇರುತ್ತಾರೆ. ಆಗ ಯಶ್ ಅವರು ಹೆಂಡದ ಬಾಟಲಿ ತೆಗೆದುಕೊಂಡು ಅಲ್ಲಿದ್ದ ಮಹಿಳೆಯ ಮೇಲೆ ಸುರಿಯುತ್ತಾರೆ. ಮೇಕಿಂಗ್ ನೋಡಿದರೆ ಇದು ರೆಟ್ರೋ ಕಥೆಯ ರೀತಿ ಕಾಣುತ್ತದೆ.
ಸದ್ಯ ರಿಲೀಸ್ ಆಗಿರೋದು ಒಂದು ಗ್ಲಿಂಪ್ಸ್ ಮಾತ್ರ. ಯಶ್ ಜನ್ಮದಿನದ ಪ್ರಯುಕ್ತ ಇದನ್ನು ರಿಲೀಸ್ ಮಾಡಲಾಗಿದೆ ಅಷ್ಟೇ. ಇದು ಸಿನಿಮಾದಲ್ಲಿ ಬರುವ ಒಂದು ಕ್ಲಿಪ್ ಎನ್ನಲಾಗಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಡ್ರಗ್ಸ್ ಬಗ್ಗೆ ಹೇಳಲಾಗುತ್ತಿದೆ ಎಂದು ಈ ಮೊದಲು ವರದಿ ಆಗಿದೆ.