- ರಾಜ್ಯ ಬಿಜೆಪಿಯಲ್ಲಿ ಬಣಗಳ ಬಡಿದಾಟ ಜೋರಾಗಿದೆ. ಸ್ವಪಕ್ಷದ ನಾಕರ ವಿರುದ್ಧವೇ ದಿನಕ್ಕೊಂದು ಹೇಳಿಕೆ ಕೊಡುತ್ತಿರುವ ಕೆಲ ನಾಯಕರುಗಳಿಂದ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಜಗಜ್ಜಾಹೀರಾಗಿದೆ. ಈ ನಡುವೆ ಬಿಜೆಪಿಯ ಇಂತಾ ಸ್ಥಿತಿಗೆ ಕೋರ್ ಕಮಿಟಿಯೂ ಕಾರಣ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಬಿಜೆಪಿಯಲ್ಲಿ ಅಸಮಾಧಾನಗದ ಹೊಗೆ ಎದ್ದಾಗಲೇ ಇದರ ಬಗ್ಗೆ ಗಮನಹರಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕಾಗಿತ್ತು. ಕರ್ನಾಟಕ ಬಿಜೆಪಿಯ ಈ ಸ್ಥಿತಿಗೆ ಕೋರ್‌ಕಮಿಟಿಯೂ ಕಾರಣ ಎಂದು ಡಿ ವಿ ಸದಾನಂದ ಗೌಡ ಅವರು ಹೇಳಿದರು.
‘ಶಿಸ್ತಿನ ಪಕ್ಷ ಅನ್ನುತ್ತಾರೆ, ಆದರೆ ಕ್ರಮ ಇಲ್ಲ’
ಬೆಂಗಳೂರಿನಲ್ಲಿ ಮಾತನಾಡಿದ ಸದಾನಂದ ಗೌಡ ಅವರು, ರಾಜ್ಯದ ಬೇರೆ ಬೇರೆ ಕಡೆಯಿಂದ ಬಂದ ವರದಿಗಳ ಬಗ್ಗೆ ಚರ್ಚೆ ಮಾಡಬೇಕಿತ್ತು. ಗಂಭೀರವಾಗಿ ಚರ್ಚೆ ಮಾಡದಿರುವುದು ಒಂದು ಕಾರಣ. ಸಂಘಟನಾ ಪರ್ವ, ಸಂಘಟನಾ ಪರ್ವ ಅಂತಾರೆ ಆದರೆ ಆಂತರಿಕಾ ಕಚ್ಚಾಟ ಪರ್ವ ಇದಾಗಿದೆ. ಶಿಸ್ತಿನ ಪಕ್ಷ, ಅಶಿಸ್ತನ್ನು ಸಹಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಿದರೂ ಕ್ರಮ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ಚರ್ಚೆ ಮಾಡಿದ್ದರೆ ಗೊಂದಲ ಕಡಿಮೆ ಆಗುತ್ತಿದ್ದವು’
ಮುಂದುವರಿದು ಮಾತನಾಡಿದ ಸದಾನಂದ ಗೌಡ ಅವರು, ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿದ್ದರೆ ಒಂದಷ್ಟು ಗೊಂದಲಗಳು ಕಡಿಮೆಯಾಗುತ್ತಿದ್ದವು. ಆಂತರಿಕವಾಗಿ ಇಷ್ಟು ದೊಡ್ಡ ಕಚ್ಚಾಟಗಳಿವೆ. ಆಂತರಿಕ ಕಚ್ಚಾಟದಲ್ಲಿ ತೊಡಗಿರುವವರು ಸಂಘಟನಾ ಪರ್ವದಲ್ಲಿ ಭಾಗವಹಿಸಿಲ್ಲ. ವ್ಯಕ್ತಿಯ ಬದಲಾವಣೆ ಚರ್ಚೆಯ ದಿಕ್ಕನ್ನೇ ಬದಲಾವಣೆ ಮಾಡಲ್ಲ. ವ್ಯಕ್ತಿಗಳಿಗೆ ಮೋಟಿವೇಷನ್ ಮಾಡಬೇಕು ಎಂದು ಅವರು ಹೇಳಿದರು.
‘ವಿಜಯೇಂದ್ರ ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸಿಲ್ಲ’
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧವೂ ಸದಾನಂದ ಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು. ಸದ್ಯ ಅಡಾಕ್ ರಾಜ್ಯಾಧ್ಯಕ್ಷರನ್ನ ನೇಮಿಸಲಾಗಿದೆ. ಈಗ ರಾಜ್ಯಾಧ್ಯಕ್ಷರ ಆಯ್ಕೆ ಮಾಡಬೇಕಿದೆ. ರಾಜ್ಯಾಧ್ಯಕ್ಷರು ಕೊಟ್ಟ ಜವಾಬ್ದಾರಿ ನಿರ್ವಹಣೆಯನ್ನ ಯಶಸ್ವಿಯಾಗಿ ಮಾಡಲಿಲ್ಲ. ಅತೃಪ್ತರನ್ನ ವಿಶ್ವಾಸಕ್ಕೆ ಪಡೆಯುವಲ್ಲಿ ವಿಫಲರಾದರು ಎಂದು ಬಿ ವೈ ವಿಜಯೇಂದ್ರ ವಿರುದ್ದ ಕಿಡಿ ಕಾರಿದರು.
‘ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಚುನಾವಣೆ’
ಇನ್ನು ನೂತನ ರಾಜ್ಯಾಧ್ಯಕ್ಷರ ನೇಮದ ಕುರಿತು ಮಾತನಾಡಿದ ಅವರು, ‘ಸಹಮತ ಇರದಿದ್ದರೆ ಪಕ್ಷದಲ್ಲಿ ಚುನಾವಣೆ ನಡೆಯುತ್ತೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಚುನಾವಣೆ ಬೇಡ ಅಂದರೆ ಅವಿರೋಧ ಆಯ್ಕೆ ಆಗುತ್ತೆ’ ಎನ್ನುವ ಮೂಲಕ ಅತೃಪ್ತರ ಮನವೊಲಿಕೆ ಆಗದಿದ್ದರೆ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತದೆ ಎಂದು ಪರೋಕ್ಷವಾಗಿ ಸುಳಿವು ನೀಡಿದರು.
ಬಿಜೆಪಿಯಲ್ಲಿ ಭಿನ್ನಮತದ ನಡುವೆ ಕಳೆದ ಬುಧವಾರ ಡಿ ವಿ ಸದಾನಂದ ಗೌಡ ಅವರ ಮನೆಯಲ್ಲಿ ಒಕ್ಕಲಿಗ ನಾಯಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದಲ್ಲಿ ಸಂಘಟನಾ ಪರ್ವ ಹಾಗೂ ಚುನಾವಣಾ ಪರ್ವ ನಡೆಯುತ್ತಿವೆ. ಅವೆರಡನ್ನು ಸಮನ್ವಯಗೊಳಿಸಿ ಮೊದಲ ಹಂತದಲ್ಲಿ ಆಗುವ ಪ್ರಕ್ರಿಯೆ ಬಗ್ಗೆ ಜಿಲ್ಲಾ ನಾಯಕರ ಜೊತೆ ಸಹಮತದ ಚರ್ಚೆ ನಡೆಸುವ ಬಗ್ಗೆ ಎಲ್ಲರು ಸಭೆ ಸೇರಿದ್ದೆವು ಎಂದು ಹೇಳಿದ್ದರು.