ಕಾರವಾರ : ಬೆಂಗಳೂರಿನ ಕೆಜಿ ಹಳ್ಳಿ- ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದು ನಿಷೇಧಿತ ಪಿಎಫ್‌ಐ ಸಂಘಟನೆಯ ಉತ್ತರ ಕನ್ನಡ ಜಿಲ್ಲೆಯ ಅಧ್ಯಕ್ಷನಾಗಿದ್ದಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸೀಕ್ರೆಟ್ ಟ್ರೈನಿಂಗ್ ನೀಡಿದ್ದ ಆರೋಪದಲ್ಲಿ ಎನ್ಐಎ ದಾಖಲಿಸಿದ ದೇಶದ್ರೋಹದ ಪ್ರಕರಣ ಎದುರಿಸುತ್ತಿದ್ದರೂ ಆರು ವರ್ಷಗಳಿಂದ ತಲೆಮರೆಸಿಕೊಂಡೇ ಓಡಾಡುತ್ತಿದ್ದ ಕುಖ್ಯಾತ ಆರೋಪಿ ಮೌಸೀನ್ ಶುಕೂರ್ ಹೊನ್ನಾವರ್ ಎಂಬಾತನನ್ನು ಶಿರಸಿ ಪೊಲೀಸರು ಕಡೆಗೂ ಬಲೆಗೆ ಕೆಡವಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್ ಹೊನ್ನಾವರ್ ಬಂಧಿತ ಆರೋಪಿ. ಬೆಂಗಳೂರಿನ ಕೆಜಿ ಹಳ್ಳಿ- ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದರೂ, ಶಿರಸಿ, ಕಾರವಾರ, ಹೈದ್ರಾಬಾದ್ ಅಂತ ತಲೆಮರೆಸಿಕೊಂಡೇ ಓಡಾಡುತ್ತಿದ್ದ. ಈ ಹಿಂದೆ ಶಿರಸಿ ತಾಲೂಕು ಘಟಕದಲ್ಲಿ ಪಿಎಫ್ಐ ಅಧ್ಯಕ್ಷನಾಗಿದ್ದ ಮೌಸೀನ್ ಆನಂತರ ಉತ್ತರ ಕನ್ನಡ ಜಿಲ್ಲಾಧ್ಯಕ್ಷನಾಗಿ ಹಲವಾರು ಯುವಕರನ್ನು ನಿಷೇಧಿತ ಸಂಘಟನೆಗೆ ಸೇರಿಸಿಕೊಂಡಿದ್ದ. ಅದಕ್ಕೂ ಹಿಂದೆ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದಾಖಲಾಗಿದ್ದ ಅಸ್ಲಾಂ ಎಂಬಾತನ ಕೊಲೆ ಪ್ರಕರಣ, ಅನೀಸ್ ತಹಶೀಲ್ದಾರ್ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ.
ಶಿರಸಿ ಡಿವೈಎಸ್‌ಪಿ ಕೆ.ಎಲ್. ಗಣೇಶ್ ನೇತೃತ್ವದಲ್ಲಿ ಪೊಲೀಸರು ಖಚಿತ ಮಾಹಿತಿಯೊಂದಿಗೆ ಈತನ ಬೆನ್ನು ಬಿದ್ದು ಇದೀಗ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಕುಟುಂಬದ ಜೊತೆಗೆ ತಿರುಗಾಟಕ್ಕೆ ಹೋಗಿದ್ದಾಗ ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ಹಲವು ವಾರಂಟ್ ಇದ್ದರೂ ಹಾಜರಾಗದೆ ತಪ್ಪಿಸಿಕೊಂಡಿದ್ದ. ಪಿಎಫ್ಐ ಬ್ಯಾನ್ ಆದಬಳಿಕವೂ ಈತ ಗುಪ್ತವಾಗಿ ಬೇರೆ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮಾಹಿತಿ ಕೇಂದ್ರ ಗುಪ್ತಚರ ಇಲಾಖೆಗೆ ಸಿಕ್ಕಿತ್ತು. ಅಲ್ಲದೆ, ದಕ್ಷಿಣ ಕನ್ನಡದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಸೂದ್ ಅಂಗಡಿ ವಿಟ್ಲ ಬಳಿಯ ಮಿತ್ತೂರಿನ ಹಾಲ್ ಒಂದರಲ್ಲಿ ನಡೆಸುತ್ತಿದ್ದ ಪಿಎಫ್ಐ ಸರ್ವಿಸ್ ಟೀಮಿನ ಟ್ರೈನಿಂಗಲ್ಲೂ ಪಾಲ್ಗೊಂಡಿದ್ದ. ಈ ಬಗ್ಗೆ ಎನ್ಐಎ ದಾಖಲಿಸಿದ ಪ್ರಕರಣದಲ್ಲಿಯೂ ಈತನ ಹೆಸರು ಸೇರಿಸಲಾಗಿತ್ತು. ಈ ನಡುವೆ, 4-5 ಬಾರಿ ಪಾಕಿಸ್ತಾನಕ್ಕೂ ಹೋಗಿ ಬಂದಿದ್ದ ಎನ್ನಲಾಗಿದೆ.
ವಿಚಿತ್ರ ಅಂದರೆ, ಆರೋಪಿ ಮೌಸೀನ್ ಭಯೋತ್ಪಾದನಾ ಚಟುವಟಿಕೆ ಪ್ರಕರಣಗಳಲ್ಲಿ ಭಾಗಿಯಾಗಿರೋದು ತಿಳಿದಿದ್ರೂ ಆತನ ಕುಟುಂಬ ಮಾಹಿತಿ ಬಚ್ಚಿಟ್ಟಿತ್ತು. ಎನ್‌ಐಎ, ಐಬಿ ಹಾಗೂ ಇತರ ಇಂಟೆಲಿಜೆನ್ಸ್ ತಂಡಗಳು ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾಗಲೂ ಮಾಹಿತಿ ನೀಡದೆ ಮರೆಮಾಚಿದ್ದರು. ಹೀಗಾಗಿ ಶಿರಸಿ ಪೊಲೀಸರು ಈಗ ಆತನ ತಾಯಿ ರಿಹಾನ, ಸಹೋದರರಾದ ಅಬ್ದುಲ್ ಶುಕೂರ್, ಅಬ್ದುಲ್ ರಜಾಕ್, ಇಜಾಜ್ ಶುಕುರ್ ಹಾಗೂ ಭಾಮೈದ ಮಹಮ್ಮದ್ ಸೊಹೈಲ್ ಕರೀಂ ಸಾಬ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಕುಟುಂಬದ ಸುಮಾರು 29 ಜನರನ್ನು ವಿಚಾರಣೆ ನಡೆಸಿದ್ದಾರೆ. ಆರೋಪಿ ಶುಕೂರ್ ಹೈದಾರಾಬಾದ್‌ನಲ್ಲಿ ಇದ್ದುಕೊಂಡು ಕೆಲವೊಮ್ಮೆ ಪೊಲೀಸರು ಹಾಗೂ ಗುಪ್ತಚರ ಇಲಾಖೆಯ ಕಣ್ಣು ತಪ್ಪಿಸಿ ಶಿರಸಿಗೆ ಬಂದು ಹೋಗುತ್ತಿದ್ದ. ಇದೇ ಕಾರಣದಿಂದ ಶಿರಸಿಯ ತನ್ನ ಪತ್ನಿಗೆ ಕೇವಲ ಆರು ವರ್ಷಗಳಲ್ಲಿ ಐದು ಮಕ್ಕಳನ್ನೂ ಕರುಣಿಸಿದ್ದಾನೆ.
ಪ್ರವೀಣ್ ನೆಟ್ಟಾರು ಕೇಸು ಸೇರಿದಂತೆ ಭಯೋತ್ಪಾದಕ ಕೃತ್ಯಗಳಲ್ಲಿ ಶುಕೂರ್ ಕೈವಾಡ ಇದ್ದುದರಿಂದ ಎನ್‌ಐಎ ಮತ್ತು ಕೇಂದ್ರ ಗುಪ್ತಚರ ಇಲಾಖೆಗಳು ಹುಡುಕಾಡುತ್ತಿದ್ದವು. ಇದೀಗ ಆರೋಪಿ ಬಂಧನ ಆಗಿರುವುದರಿಂದ ಎನ್‌ಐಎ ಹಾಗೂ ಐಬಿ ವಿಚಾರಣೆಗೆ ಒಳಪಡಿಸಲಿವೆ.