ರಾಜ್ಯ ರಾಜಕಾರಣದಲ್ಲಿ ದಶಕದ ದೊಡ್ಡ ಹೈಡ್ರಾಮಾ ಅಂತ್ಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇಂದು ನಡೆದ ಸಚಿವರ ಮಹತ್ವದ ‘ಬ್ರೇಕ್ಫಾಸ್ಟ್ ಮೀಟಿಂಗ್’ನಲ್ಲಿ ಸಿದ್ದರಾಮಯ್ಯ ಅವರು ತಾವಾಗಿಯೇ ಪದತ್ಯಾಗ ಮಾಡಲಿರುವ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ರಾಜಭವನಕ್ಕೆ ತೆರಳಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ. ಒಂದು ವೇಳೆ ರಾಜ್ಯಪಾಲರು ಲಭ್ಯವಿಲ್ಲದಿದ್ದರೆ, ಅವರ ಕಾರ್ಯದರ್ಶಿಗೆ ಪತ್ರ ಹಸ್ತಾಂತರಿಸಲು ನಿರ್ಧರಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಅತ್ಯಂತ ಸೌಹಾರ್ದಯುತವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ಸಭೆಯಲ್ಲಿ ಸಿಎಂ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪರಸ್ಪರ ಆಲಿಂಗಿಸಿಕೊಂಡಿದ್ದಾರೆ.
ಮುಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ರಾಜ್ಯದಲ್ಲಿ ಹೊಸ ನಾಯಕತ್ವದ ಅಧ್ಯಾಯ ಆರಂಭವಾಗುವುದು ಬಹುತೇಕ ಖಚಿತವಾಗಿದೆ.
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಮತ್ತು ನಾಯಕತ್ವ ಬದಲಾವಣೆಯ ಭಾರಿ ಬೆಳವಣಿಗೆಗಳ ಬೆನ್ನಲ್ಲೇ, ಕರ್ನಾಟಕ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಹತ್ವದ ಪೋಸ್ಟ್ ಒಂದನ್ನು ಹಂಚಿಕೊಂಡಿದೆ.
“ಅಂದು, ಇಂದು, ಎಂದೆಂದಿಗೂ ಒಗ್ಗಟ್ಟೇ ನಮ್ಮ ಶಕ್ತಿ. ಜನಸೇವೆಯೇ ನಮ್ಮ ಬದ್ಧತೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶ ರವಾನಿಸಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪರಸ್ಪರ ಆಲಿಂಗಿಸಿಕೊಂಡಿರುವ ಫೋಟೋಗಳ ಹಿನ್ನೆಲೆಯಲ್ಲಿ ಈ ಟ್ವೀಟ್ ಹೊರಬಿದ್ದಿದೆ.
ಕೇಂದ್ರದ ತನಿಖಾ ಸಂಸ್ಥೆಗಳ ದಾಳಿ, ಜೈಲು ವಾಸ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಚಲ ಬಿಡದೆ ಹೋರಾಡಿದ ಡಿ.ಕೆ. ಶಿವಕುಮಾರ್ ಅವರ ಕನಸು ನನಸಾಗುವ ಸಮಯ ಹತ್ತಿರವಾಗಿದ್ದು, ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಅತ್ಯಂತ ಸ್ಮೂತ್ ಆಗಿ ಮುಗಿಸಲು ಕಾಂಗ್ರೆಸ್ ಸಜ್ಜಾಗಿದೆ.

























