ಪುತ್ತೂರು : ದರ್ಬೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಘಟನೆಗ ಸಂಬಂಧಿಸಿ ಧಾರ್ಮಿಕ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕದಡುವಂತಹ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಬಂದ್‌ಗೆ ಕರೆಕೊಟ್ಟ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಮುಖಂಡ ದಿನೇಶ್ ಪಂಜಿಗ ಅವರ ವಿರುದ್ಧ ಮುಂದಿನ ಆದೇಶದ ತನಕ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ರಾಜ್ಯ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.
ದರ್ಬೆಯಲ್ಲಿ ಇತ್ತೀಚೆಗೆ ನಡೆದ ಗಲಾಟೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಬಂದ್‌ಗೆ ಕರೆ ನೀಡಿದ ಆರೋಪದಡಿ ದಿನೇಶ್ ಪಂಜಿಗ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಇದೀಗ ಹೈಕೋರ್ಟ್‌ನಿಂದ ಮಹತ್ವದ ಆದೇಶ ಹೊರಬಿದ್ದಿದೆ.
ಭಾರತೀಯ ನ್ಯಾಯ ಸಂಹಿತೆಯ ಕಲಂ 353(2), 57 ಹಾಗೂ 189ರ ಅಡಿಯಲ್ಲಿ ದಾಖಲಾಗಿರುವ ಈ ಪ್ರಕರಣದಲ್ಲಿ ದಿನೇಶ್ ಪಂಜಿಗ ವಿರುದ್ಧ ಸದ್ಯಕ್ಕೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಆದೇಶಿಸಿದೆ.
ತನ್ನ ವಿರುದ್ಧ ದಾಖಲಾಗಿರುವ ಎ-ಐಆರ್ ರದ್ದುಪಡಿಸುವಂತೆ ಕೋರಿ ದಿನೇಶ್ ಪಂಜಿಗ ಅವರು ಕರ್ನಾಟಕ ಹೈಕೋರ್ಟ್‌ಗೆ ಕ್ರಿಮಿನಲ್ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಮುಂದಿನ ಆದೇಶದ ತನಕ ದೂರುದಾರ ದಿನೇಶ್ ಪಂಜಿಗ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ನೀಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿದ್ದಾರೆ. ಪ್ರಕರಣದಲ್ಲಿ ದೂರುದಾರ ದಿನೇಶ್ ಪಂಜಿಗ ಅವರ ಪರವಾಗಿ ಹಿರಿಯ ವಕೀಲ ಅರುಣ್‌ಶ್ಯಾಂ ಪುತ್ತೂರು ವಾದಿಸಿದ್ದರು.ವಕೀಲ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.
























