ಪುತ್ತೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಪುತ್ತೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಪಂಚಾಯತ್ ಪುತ್ತೂರು ಸಂಯುಕ್ತ ಆಶ್ರಯದಲ್ಲಿ 2026-27ನೇ ಸಾಲಿನ ಕೇಂದ್ರ ಸರಕಾರದ ಹಿರಿಯ ನಾಗರಿಕರ ರಾಜ್ಯ ಕ್ರಿಯಾ ಯೋಜನೆಯಂತೆ ತಾಲೂಕು ಮಟ್ಟದಲ್ಲಿ ಹಿರಿಯ ನಾಗರಿಕರಿಗಾಗಿ ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮ ಸೆ.23ರಂದು ಪುತ್ತೂರು ಲಯನ್ಸ್ ಕ್ಲಬ್‌ನಲ್ಲಿ ನಡೆಯಿತು.
ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪಯ್ಯ ಉದ್ಘಾಟಿಸಿ ಮಾತನಾಡಿ ಎಲ್ಲಾ ಬೆರಳುಗಳು ಒಂದೇ ರೀತಿ ಇರುವುದಿಲ್ಲ. ಅದೇ ರೀತಿ ವಿಶೇಷ ಚೇತನರೆಂದು ನಿಮಗೆ ಕೀಳರಿಮೆ ಇರಬಾರದು. ವಿಶೇಷ ಸಾಧನೆ ಮಾಡಿದ ಹಲವಾರು ವಿಶೇಷ ಚೇತನರು ನಮ್ಮ ನಾಡಿನಲ್ಲಿ, ದೇಸದಲ್ಲಿ ಇದ್ದಾರೆ. ಸಮಾಜ ನಿಮಗೆ ಎಲ್ಲಾ ಸೌಲಭ್ಯ ನೀಡಿದೆ ಇದನ್ನು ಸದುಪಯೋಗ ಪಡಿಸಿ ಸಾಧನೆ ಮಾಡಬಹುದು ಎಂದರು. ದೇವರ ಕಾರ್ಯ, ಪಿತೃ ಕಾರ್ಯ ಮಾಡುವುದರಲ್ಲಿ ತಪ್ಪು ಮಾಡಬಾರದು. ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕಾರ ನೀಡಿದರೆ ತಂದೆ ತಾಯಿಗಳನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಾರೆ. ವೃದ್ಧಾಪ್ಯದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ ಎಂದರು.
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎಂ. ಮಾತನಾಡಿ ಮಕ್ಕಳಿಗೆ ಸಂಸ್ಕಾರ ಕಳಿಸಿದರೆ ಹಿರಿಯರಿಗೆ ಕಾನೂನು ಹೇಳಿ ಕೊಡುವ ಅನಿವಾರ್ಯತೆ ಬರುವುದಿಲ್ಲ. ಮಕ್ಕಳು ಒಟ್ಟಿಗೆ ಇದ್ದಾಗ ಹಿರಿಯ ನಾಗರಿಕರ ಜೀವನವೂ ಖುಷಿಯಾಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್. ಮಾತನಾಡಿ ಹಳೆ ಬೇರು ಗಟ್ಟಿ ಇದ್ದಾಗ ಹೊಸ ಚಿಗುರು ಬರಲು ಸಾಧ್ಯ. ಕೆಲಸ ಮಾಡುತ್ತಾ ಆಕ್ಟಿವ್ ಇದ್ದಾಗ ಹಿರಿಯರ ಅರೋಗ್ಯವೂ ಸುಧಾರಿಸುತ್ತದೆ. ಇಲಾಖೆಗಳಲ್ಲಿಯೂ ಹಿರಿಯರಿಗೆ ಉತ್ತಮ ಸೇವೆ ಕೊಡಬೇಕು ಎಂದು ಹೇಳಿದರು.ಸಂಪನ್ಮೂಲ ವ್ಯಕ್ತಿಗಳಾದ ವಕೀಲ, ಮನೋಹರ್ ಎ. ಹಿರಿಯ ನಾಗರಿಕರ ಕಾನೂನು ಮಾಹಿತಿ ನೀಡಿದರು. ಪುತ್ತೂರು ಆರ್ಥಿಕ ಸಾಕ್ಷರತಾ ಕೇಂದ್ರದ ಆಪ್ತ ಸಮಾಲೋಚಕಿ ಗೀತಾ ವಿಜಯ್ ಸರಕಾರದ ಯೋಜನೆಗಳ ಮಾಹಿತಿ ನೀಡಿದರು.
ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್ ಡಿ.ಕೆ., ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್, ಕೆಎಸ್‌ಆರ್‌ಟಿಸಿ ಮುಕ್ರಂಪಾಡಿ ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್, ಪುತ್ತೂರು ಹಿರಿಯ ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರೊ.ಝೇವಿಯರ್ ಡಿಸೋಜ, ಪುತ್ತೂರು ಶಿಶು ಅಭಿವೃದ್ಧಿ ಇಲಾಖೆಯ ಮಂಗಳ ಕಾಳೆ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ದತ್ತಾತ್ರೇಯ ರಾವ್, ಪುತ್ತೂರು ವಕೀಲರ ಸಂಘದ ಜತೆ ಕಾರ್ಯದರ್ಶಿ ಉದಯಚಂದ್ರ ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನ ರೈ ಸ್ವಾಗತಿಸಿದರು. ಗ್ರಾಮೀಣ ಪುನರ್‌ವಸತಿ ಕಾರ್ಯಕರ್ತರಾದ ಮೋಹನ್ ಕೆಪಿ ಮತ್ತು ಮೀರಮ್ಮ ಕಾರ್ಯಕ್ರಮ ನಿರೂಪಿಸಿದರು.
























