ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವಂತೆ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಸರ್ಕಾರ ಅನುಮೋದಿಸಿದ್ದು, ಈ ಕುರಿತು ಅನುಷ್ಠಾನ ಆದೇಶ ಹೊರಡಿಸಲಾಗಿದೆ.
ಈ ಆದೇಶದ ಅನುಸಾರ, ಎರಡೂ ಜಿಲ್ಲೆಗಳ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಇನ್ಮುಂದೆ ತುಳು ಭಾಷೆಯಲ್ಲೇ ಅರ್ಜಿ ಹಾಗೂ ಮನವಿಗಳನ್ನು ಸಲ್ಲಿಸಬಹುದಾಗಿದೆ. ಅಧಿಕಾರಿಗಳು ಕನ್ನಡದ ಜೊತೆಗೆ ತುಳುವಿನಲ್ಲೂ ಉತ್ತರಿಸಲಿದ್ದು, ಜಿಲ್ಲಾಧಿಕಾರಿಗಳ ಪ್ರಮುಖ ಆದೇಶಗಳು ಹಾಗೂ ಸರ್ಕಾರಿ ಕಚೇರಿಗಳ ಸೂಚನಾ ಫಲಕಗಳಲ್ಲಿ ಕನ್ನಡದೊಂದಿಗೆ ತುಳು ಭಾಷೆ ಕೂಡ ಬಳಕೆಯಾಗಲಿದೆ. ಅಲ್ಲದೆ, ಆಡಳಿತಾತ್ಮಕ ಕಾರ್ಯಗಳಲ್ಲಿ ತುಳು ಭಾಷೆಯನ್ನು ಕನ್ನಡ ಲಿಪಿಯಲ್ಲೇ ಬರೆಯಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಉದ್ದೇಶಕ್ಕಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಪ್ರತ್ಯೇಕ ಅನುಷ್ಠಾನ ಘಟಕಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಒಟ್ಟು 20 ಭಾಷಾಂತರಕಾರರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ತಲಾ ಇಬ್ಬರು ಹಾಗೂ ಎರಡೂ ಜಿಲ್ಲೆಗಳ 16 ತಾಲೂಕುಗಳ ತಹಶೀಲ್ದಾರ್ ಕಚೇರಿಗಳಲ್ಲಿ ತಲಾ ಒಬ್ಬರಂತೆ ಈ ಭಾಷಾಂತರಕಾರರು ಸೇವೆ ಸಲ್ಲಿಸಲಿದ್ದಾರೆ. ಇವರಿಗೆ ಎಲ್ಲಾ ಭತ್ಯೆಗಳನ್ನು ಸೇರಿ ತಿಂಗಳಿಗೆ ರೂ. 30,000 ಗೌರವ ಸಂಭಾವನೆ ನೀಡಲಾಗುತ್ತದೆ.
ಮಂಗಳೂರಿನಲ್ಲಿ ನಡೆದ ಮೊದಲ ಕರಾವಳಿ ಕ್ಯಾಬಿನೆಟ್ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತುಳು ಭಾಷೆಗೆ ಮಾನ್ಯತೆ ನೀಡುವಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಶ್ರಮಿಸಿದ್ದಾರೆ.
























