ಆಂಧ್ರಪ್ರದೇಶದ ಪ್ರಸಿದ್ಧ ಪುಣ್ಯಕ್ಷೇತ್ರ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತ ದಂಪತಿಯೊಬ್ಬರು ಬರೋಬ್ಬರಿ 121 ಕೆ.ಜಿ. ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ.
ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಮತ್ತು ಅವರ ಪತ್ನಿ ರಾಧಿಕಾ ಜೈನ್ ಮಕ್ಕಳೊಂದಿಗೆ ಆಗಮಿಸಿ ಈ ಅಪರೂಪದ ಕಾಣಿಕೆಯನ್ನು ಸಲ್ಲಿಸಿದ್ದಾರೆ. ಸುಮಾರು 207.6 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ನವೆಂಬರ್ 26ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.
ಒಟ್ಟು 121 ಕೆ.ಜಿ. ಚಿನ್ನದಲ್ಲಿ 106 ಕೆ.ಜಿ. ಚಿನ್ನವನ್ನು ಶ್ರೀ ವೆಂಕಟೇಶ್ವರ ಸ್ವಾಮಿಯ ಅಲಂಕಾರಕ್ಕಾಗಿ 46 ವಿಶೇಷ ಆಭರಣಗಳನ್ನಾಗಿ ತಯಾರಿಸಲಾಗಿದೆ. ಉಳಿದ 15 ಕೆ.ಜಿ. ಚಿನ್ನವನ್ನು ತಿರುಚಾನೂರಿನ ಶ್ರೀ ಪದ್ಮಾವತಿ ಅಮ್ಮನವರಿಗೆ ಚಿನ್ನದ ವಸ್ತ್ರ ತಯಾರಿಸಲು ಬಳಸಲಾಗುತ್ತದೆ.
ಕಾಣಿಕೆಯಲ್ಲಿ ಚಿನ್ನದ ಕಿರೀಟ, ಹಾರಗಳು, ಬಳೆಗಳು, ಸೊಂಟದ ಆಭರಣಗಳು, ಕಾಲಿನ ಆಭರಣಗಳು ಸೇರಿದಂತೆ ವಜ್ರ ಹಾಗೂ ಅಮೂಲ್ಯ ರತ್ನಗಳಿಂದ ಅಲಂಕರಿಸಲಾದ ವಿವಿಧ ಆಭರಣಗಳಿವೆ.
ತಿರುಮಲ ದೇವಸ್ಥಾನದ ಇತಿಹಾಸದಲ್ಲೇ ವೈಯಕ್ತಿಕ ಭಕ್ತರಿಂದ ಸಲ್ಲಿಕೆಯಾದ ಅತಿ ದೊಡ್ಡ ಚಿನ್ನದ ಕಾಣಿಕೆಗಳಲ್ಲಿ ಇದೂ ಒಂದಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಉದ್ಯಮಿಯಾಗಿ ಮಾತ್ರವಲ್ಲದೆ, ಆರೋಗ್ಯ ಸೇವಾ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಅವರು, ‘ಆಕ್ಸೆಸ್ ಹೆಲ್ತ್ಕೇರ್’ ಸಂಸ್ಥೆಯ ಸಂಸ್ಥಾಪಕ ಹಾಗೂ ಉಪಾಧ್ಯಕ್ಷರಾಗಿದ್ದಾರೆ
ವರ್ಧಮಾನ್ ಅವರು ಕೇವಲ ಉದ್ಯಮಿಯಾಗಿ ಗುರುತಿಸಿಕೊಂಡಿಲ್ಲ. ಸಮಾಜ ಸೇವೆಯಲ್ಲೂ ಇವರ ಹೆಸರು ಮುಂಚೂಣಿಯಲ್ಲಿದೆ. ವೈದ್ಯಕೀಯ ಸೇವೆ, ಉದ್ಯೋಗ ಸೃಷ್ಟಿ, ಶಿಕ್ಷಣ ಸೇರಿದಂತೆ ಇತರೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜೈನ್ ಚೆನ್ನೈನ ಪ್ರತಿಷ್ಠಿತ Loyola College ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಅಮೆರಿಕದ ಟೆಕ್ಸಾಸ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪಡೆದಿದ್ದಾರೆ. ಶಿಕ್ಷಣದ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸಿಕೊಂಡು ಹೊಸ ಉದ್ಯಮ ಕಟ್ಟುವ ಕನಸು ಕಂಡು ವೃತ್ತಿ ಶುರು ಮಾಡಿದರು ಎಂದು ವರದಿಯಾಗಿದೆ.
ವರ್ಧಮಾನ್ ಜೈನ್ ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಡೆಲ್ ಸಂಸ್ಥೆಯೊಂದಿಗೆ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ಡೆಲ್ ಸರ್ವಿಸಸ್ನ ಜಾಗತಿಕ ಬಿಪಿಒ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವರು, ಆರೋಗ್ಯ ಸೇವೆ, ವಿಮೆ, ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರಗಳ 100ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸುವ ಕಾರ್ಯಾಚರಣೆಗಳನ್ನು ಮುನ್ನಡೆಸಿದ್ದರು. ಸುಮಾರು 9,000 ಸಿಬ್ಬಂದಿಯ ಜಾಗತಿಕ ಕಾರ್ಯಾಚರಣೆಗಳ ನಿರ್ವಹಣೆಯ ಅನುಭವ ಅವರಿಗಿದೆ.
ಇದಕ್ಕೂ ಮೊದಲು ಅವರು ವಿಷನ್ ಹೆಲ್ತ್ಸೋರ್ಸ್ ಸಂಸ್ಥೆಯ ಸಹ-ಸಂಸ್ಥಾಪಕರಾಗಿದ್ದರು. 2003ರಲ್ಲಿ ಈ ಸಂಸ್ಥೆಯನ್ನು ಪೆರೋಟ್ ಸಿಸ್ಟಮ್ಸ್ ಸ್ವಾಧೀನಪಡಿಸಿಕೊಂಡಿತ್ತು. ಬಳಿಕ ಡೆಲ್ ಸರ್ವಿಸಸ್ನೊಂದಿಗೆ ವಿಲೀನಗೊಂಡ ಕಾರ್ಯಾಚರಣೆಗಳಲ್ಲಿ ಜೈನ್ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
2011ರಲ್ಲಿ ಸ್ಥಾಪನೆಯಾದ ಆಕ್ಸೆಸ್ ಹೆಲ್ತ್ಕೇರ್ ಸಂಸ್ಥೆಯ ಬೆಳವಣಿಗೆಯಲ್ಲಿ ವರ್ಧಮಾನ್ ಜೈನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳಿಗೆ ವೈದ್ಯಕೀಯ ಬಿಲ್ಲಿಂಗ್, ವೈದ್ಯಕೀಯ ಕೋಡಿಂಗ್, ವಿಮಾ ಕ್ಲೇಮ್ ನಿರ್ವಹಣೆ ಹಾಗೂ ಹಣಕಾಸು ಪ್ರಕ್ರಿಯೆಗಳ ನಿರ್ವಹಣೆಗೆ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಈ ಸಂಸ್ಥೆ ಒದಗಿಸುತ್ತದೆ.
ಕೃತಕ ಬುದ್ಧಿಮತ್ತೆ (AI), ಮಷಿನ್ ಲರ್ನಿಂಗ್ ಮತ್ತು ರೊಬೊಟಿಕ್ ಪ್ರೊಸೆಸ್ ಆಟೊಮೇಷನ್ (RPA) ತಂತ್ರಜ್ಞಾನಗಳ ಬಳಕೆಯ ಮೂಲಕ ಆರೋಗ್ಯ ಸೇವೆಗಳ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡಿದ್ದಾರೆ. ವೈದ್ಯಕೀಯ ಚಿತ್ರಗಳ ಸಂಸ್ಕರಣೆ ಮತ್ತು ಎಲೆಕ್ಟ್ರಾನಿಕ್ ಚಿತ್ರಗಳಲ್ಲಿನ ಮಾಹಿತಿಯನ್ನು ಬಳಸುವ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪೇಟೆಂಟ್ಗಳನ್ನು ಕೂಡ ಹೊಂದಿದ್ದಾರೆ.
ಭಕ್ತಿಯ ಜೊತೆಗೆ ದಾನಧರ್ಮದ ಮೂಲಕ ದೇವರ ಸೇವೆ ಸಲ್ಲಿಸಿದ ಈ ದಂಪತಿಯ ಕೊಡುಗೆ ಇದೀಗ ದೇಶಾದ್ಯಂತ ಗಮನ ಸೆಳೆದಿದೆ.
























