ಪುತ್ತೂರು: ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ, ಮಾಗಣೆ ದೇವಸ್ಥಾನವಾಗಿರುವ ಪಡ್ನರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನಕ್ಕೆ ಆವಶ್ಯಕವಾದ ಸುಮಾರು ರೂ.25 ಲಕ್ಷ ಮೌಲ್ಯದ ಮರವನ್ನು ಭಕ್ತರೋರ್ವರು ದೇಣಿಗೆ ನೀಡಿದ್ದಾರೆ. ಉಳಿದಂತೆ ರೂ.15ಲಕ್ಷ ವೆಚ್ಚದ ಮರ ಖರೀದಿಸಲಾಗಿದೆ. ವಾಸ್ತು ಶಿಲ್ಪಿ ಮಹೇಶ್ ಪ್ರಸಾದ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಹರೀಶ್ ಆಚಾರ್ಯ ಮೂಡಬಿದರೆ ಧ್ವಜಸ್ಥಂಭದ ಕೆತ್ತನೆಯ ಕೆಲಸಗಳು ಪೂರ್ಣಗೊಂಡಿದೆ. ಪದ್ಮನಾಭ ಪಿಲಿಗೂಡು ಅವರ ನೇತೃತ್ವದಲ್ಲಿ ಶಿಲೆ ಕಲ್ಲಿನ ಕೆಲಸಗಳು ನಡೆಯಲಿದೆ. ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮಗಳು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ತೈಲಾಧಿವಾಸಕ್ಕೆ ಸುಮಾರು ಒಂದು ಸಾವಿರ ಲೀಟರ್ ಎಳ್ಳೆಣ್ಣೆಯ ಆವಶ್ಯಕತೆಯಿದ್ದು ಭಕ್ತರು ಸಹಕರಿಸುವಂತೆ ಅವರು ಮನವಿ ಮಾಡಿದರು. ಶ್ರೀಕ್ಷೇತ್ರವು 1994ರಲ್ಲಿ ಜೀರ್ಣೋದ್ಧಾರಗೊಂಡಿತ್ತು. ಆನಂತರ 2013ರಲ್ಲಿ ನೂತನ ಸುತ್ತುಪೌಲಿ, ನಿರ್ಮಿಸಿ ಅದ್ಧೂರಿ ಬ್ರಹ್ಮಕಲಶ ನೆರವೇರಿತ್ತು. ನಂತರದ ದಿನಗಳಲ್ಲಿ ನಿರ್ವಹಣೆಯ ಕಷ್ಟವನ್ನರಿತು ಹಿರಿಯರ ಸಲಹೆಯಂತೆ ಮೂರು ಹೊತ್ತಿನ ಜಾತ್ರೋತ್ಸವಗಳು ನಡೆಯುತ್ತಾ ಬಂದಿರುತ್ತದೆ. ಈಗಿನ ಗರ್ಭಗುಡಿಯ ಕಾಂಕ್ರೀಟ್ ಗುಡಿಯಾಗಿದ್ದು ಅದರಲ್ಲಿ ನ್ಯೂನ್ಯತೆಯಿರುವುದಾಗಿ ದೇವಸ್ಥಾನದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ. ಹೀಗಾಗಿ ನೂತನ ತಾಮ್ರದ ಹೊದಿಕೆಯ ಗರ್ಭಗುಡಿ ನಮಸ್ಕಾರ ಮಂಟಪ, ಮಹಾಬಲಿ ಪೀಠ, ಧ್ವಜಸ್ಥಂಭ, ದೇವರ ಅವಭ್ರತ ಕೆರೆ ದುರಸ್ಥಿ, ರಥದ ಮಂದಿರ, ಪಾಕಶಾಲೆ ನಿರ್ಮಾಣಗೊಳ್ಳಬೇಕಿದೆ.
ಜೀರ್ಣೋದ್ಧಾರಕ್ಕೆ ಪೂರಕವಾಗಿ ನಾಗನ ಕಟ್ಟೆ, ಪಂಜುರ್ಲಿ ದೈವ ಗುಡಿಯು ಈಗಾಗಲೇ ನಿರ್ಮಾಣಗೊಂಡು ಪ್ರತಿಷ್ಠಾ ಕಾರ್ಯಗಳು ನೆರವೇರಿರುತ್ತದೆ.
ದೇವಸ್ಥಾನದ ಅರ್ಚಕರ ಮನೆ ಶಿಥಿಲಾವಸ್ಥೆಯಲ್ಲಿದ್ದು ಹೊಸ ಮನೆ ನಿರ್ಮಾಣಕ್ಕೆ ಶಾಸಕರು ರೂ.13ಲಕ್ಷ ಅನುದಾನ ನೀಡಿರುತ್ತಾರೆ. ಅಲ್ಲದೆ ಜೀರ್ಣೋದ್ದಾರ ಕಾರ್ಯಗಳಿಗೆ ಶಾಸಕರು ರೂ.10ಲಕ್ಷ ಹಾಗೂ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕ ಪಕಳ ರೂ.5ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಕರ್ನಾಟಕ ಬ್ಯಾಂಕ್ನ ಸಿಎಸ್ಆರ್ ನಿಧಿಯಿಂದ ರೂ.10ಈಗಾಗಲೇ ಮಂಜೂರುಗೊಂಡಿದೆ. ಅಲ್ಲದೆ ದೇವರ ಅವಭ್ರತ ಕೆರೆಯು ರೂ.25ಲಕ್ಷದಲ್ಲಿ ದುರಸ್ತಿಯಾಗಿದೆ. ಜೊತೆಗೆ ರಥದ ಮಂದಿರ, ಪಾಕಶಾಲೆ ನಿರ್ಮಾಣಗೊಳ್ಳಬೇಕಿದೆ.
ಅರ್ಚಕರ ಮನೆ ಶಿಥಿಲಾವಸ್ಥೆಯಲ್ಲಿ ಹೊಸ ಮನೆಗಕಟ್ಟಲು ರೂ.13ಲಕ್ಷ ಅನುದಾನ ನೀಡಿರುತ್ತಾರೆ. ಜೀರ್ಣೋದ್ಧಾರ ಕಾರ್ಯಗಳಿಗೆ ಶಾಸಕರು ರೂ. 10ಲಕ್ಷ ಮತ್ತು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ ರೂ.5ಲಕ್ಷ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ಶೌಚಾಲಯ ನಿರ್ಮಾಣಕ್ಕೆ ಕರ್ನಾಟಕ ಬ್ಯಾಂಕ್ನಿಂದ ರೂ.10ಲಕ್ಷ ಅನುದಾನ ಮಂಜೂರಾಗಿರುವುದು ಸೇರಿದಂತೆ ಒಟ್ಟು ರೂ.65ಲಕ್ಷ ಅನುದಾನ ಬಂದಿರುತ್ತದೆ. ಗ್ರಾಮದಲ್ಲಿ ಸುಮಾರು 700 ಮನೆಯಿದ್ದು ಪ್ರತಿ ಮನೆಯಿಂದ ರೂ.30 ಸಾವಿರ ನೀಡುವಂತೆ ಮನವಿ ಮಾಡಲಾಗಿದೆ. ಸುಮಾರು 250 ಮನೆಯಿಂದ ಮೊದಲ ಕಂತಿನ ಮೊತ್ತ ಜಮೆಯಾಗಿರುತ್ತದೆ. ಪಡ್ನರು ಜನಾರ್ದನ ಯುವಕ ಮಂಡಲ, ಸರಸ್ವತಿ ಯುವತಿ ಮಂಡಲ, ವರಮಹಾಲಕ್ಷ್ಮೀ ಪೂಜಾ ಸಮಿತಿ, ಗಣೇಶೋತ್ಸವ ಸಮಿತಿ ಹಾಗೂ ಅನ್ನಪೂರ್ಣೇಶ್ವರಿ ಭಜನಾ ಮಂದಿರದವರು ಈಗಾಗಲೇ ದೊಡ್ಡ ಮೊತ್ತದ ದೇಣಿಗೆ ನೀಡಿ ಸಹಕರಿಸಿರುತ್ತಾರೆ. ಜೀರ್ಣೋದ್ಧಾರದ ಕಾರ್ಯಗಳಿಗೆ ಇನ್ನೂ ಸುಮಾರು 1.50ಕೋಟಿ ಮೊತ್ತದ ಆವಶ್ಯಕತೆಯಿದೆ. ಕ್ಷೇತ್ರದ ಪೂರ್ವದಲ್ಲಿ 5 ದಿನಗಳ ಜಾತ್ರೋತ್ಸವ ನಡೆಯುತ್ತಿತ್ತು ಎನ್ನುವುದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.
ಜಾತ್ರೋತ್ಸವದ ನಿರ್ವಹಣೆಯ ಕಷ್ಟವನ್ನರಿತ ಹಿರಿಯರ ಸಲಹೆಯಂತೆ ಕಳೆದ ಹಲವು ವರ್ಷಗಳಿಂದ 3 ಹೊತ್ತಿನ ಜಾತ್ರೋತ್ಸವ ನೆರವೇರುತ್ತಿದೆ. ಧ್ವಜಸ್ಥಂಭವಿದ್ದರೂ ಧ್ವಜಾರೋಹಣ ನಡೆಯತ್ತಿರಲಿಲ್ಲ. ಇದರಿಂದ ದೋಷಗಳು ಕಂಡು ಬಂದಿದ್ದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಕ್ಷೇತ್ರ ಜೀರ್ಣೋದ್ದಾರಗೊಂಡು ಬ್ರಹ್ಮಕಲಶ ನೆರವೇರಿದ ಬಳಿಕ ಧ್ವಜಾರೋಹಣದೊಂದಿಗೆ 5 ದಿನಗಳ ಜಾತ್ರೋತ್ಸವ ನಡೆಯಲಿದೆ. ಈ ವರ್ಷದ ಜಾತ್ರೋತ್ಸವದಲ್ಲಿ ಈಗಿನ ಪದ್ದತಿಯಂತೆ 3 ಹೊತ್ತಿನ ಜಾತ್ರೋತ್ಸವ ನಡೆಯಲಿದೆ. ಇದು 3 ಹೊತ್ತಿನ ಕೊನೆಯ ಜಾತ್ರೆಯಾಗಲಿದೆ. ಇನ್ನೂ ಒಂದೂವರೆ ವರ್ಷಗಳಲ್ಲಿ ಜೀರ್ಣೋದ್ದಾರಗಳು ಪೂರ್ಣಗೊಂಡು ಬ್ರಹ್ಮಕಲಶದ ಬಳಿಕ ಧ್ವಜಾರೋಹಣದೊಂದಿಗೆ 5 ದಿನಗಳ ನಡೆಯುವ ಮೂಲಕ ಜಾತ್ರೋತ್ಸವದ ಪುರಾತನ ಇತಿಹಾಸ ಮತ್ತೆ ಮರುಕಳಿಸಲಿದೆ ಎಂದು ಹೇಳಿದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಹಾರಕರೆ ವೆಂಕಟ್ರಮಣ ಭಟ್ ಅವರ ಅಧ್ಯಕ್ಷತೆಯಲ್ಲಿ ಕಳೆದ 24 ವರ್ಷಗಳಿಂದ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಾ ಬರುತ್ತಿದೆ. ಪ್ರತಿಯೊಂದು ಕೆಲಸ ಕಾರ್ಯಗಳನ್ನು ಪ್ರಶ್ನಾ ಚಿಂತನೆ ನಡೆಸಿ, ದೈವಜ್ಞರ ಮಾರ್ಗದರ್ಶನದಂತೆ ಭಕ್ತರ ಸಭೆ ನಡೆಸಿ ಮುಂದುವರಿಯುವ ಮೂಲಕ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಇದಕ್ಕೆ ಭಕ್ತರ ಸಹಕಾರವೂ ದೊರತೆಯುತ್ತಿದೆ ಎಂದು ಹೇಳಿದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಪೂವಪ್ಪ ದೇಂತಡ್ಕ, ಶ್ರೀಧರ ಕುಂಜಾರು ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಮನೋಹರ ಆರುವಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
























