ಪುತ್ತೂರು : ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನ ನಮ್ಮೆಲ್ಲರ ಧಾರ್ಮಿಕ ಶ್ರದ್ಧೆ ನಂಬಿಕೆ ಮತ್ತು ಪಾರಂಪರಿಕ ದೇವಸ್ಥಾನವಾಗಿದೆ. ದೇವಸ್ಥಾನದ ಕಳೆದ ಕೆಲವು ದಿನಗಳಿಂದ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಕೆಲವೊಂದು ವಿಚಾರಗಳಲ್ಲಿ ದೇವಾಲಯದ ಆಡಳಿತ ಸಮಿತಿ ಇಲಾಖೆ ಹಾಗೂ ಸರಕಾರದ ನಿಯಮಗಳನ್ನು ಉಲ್ಲಂಘಿಸಿ, ಸಮರ್ಪಕವಾದ ಯಾವುದೇ ಅನುಮತಿಗಳನ್ನು ಪಡೆದುಕೊಳ್ಳದೆ ಕೆಲಸ ಕಾರ್ಯಗಳನ್ನು ಹಾಗೂ ಹಣಕಾಸಿನ ದುರುಪಯೋಗಗಳನ್ನು ಮಾಡಿರುವಂಥದ್ದು ಮತ್ತು ದೈನಂದಿನ ಆಡಳಿತದಲ್ಲಿ ಲೆಕ್ಕ ಪತ್ರದಲ್ಲಿನ ಲೋಪದೋಷಗಳು ಕಂಡುಬಂದಿರುತ್ತದೆ.
ಈ ಕಾರಣದಿಂದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಜಿಲ್ಲಾಧಿಕಾರಿಗಳಿಗೆ ದೂರುಗಳನ್ನು ನೀಡಿರುತ್ತೇವೆ. ಈ ಬಗ್ಗೆ ಇಲಾಖೆಯ ತನಿಖೆಯು ನಡೆಯುತ್ತಿದೆ. ಅಲ್ಲದೆ, ನಾನು (ವಿರೂಪಾಕ್ಷ ಭಟ್) ಹಾಗೂ ದಿನೇಶ್ ಜೈನ್ ಇವರು ಈ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ WP No 32620/2020 ದಾವೆಯನ್ನು ದಾಖಲು ಮಾಡಿ ಈ ಮೂಲಕ ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದು ದೂರುದಾರ ವಿರೂಪಾಕ್ಷ ಭಟ್ ಹೇಳಿದ್ದಾರೆ.
ಅವರು ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಇಲಾಖಾ ಅನುಮತಿ ರಹಿತ ಕಾಮಗಾರಿಗಳಿಗೆ ಉಚ್ಚ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆಯ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮಈ ಕಾನೂನು ಹೋರಾಟದಲ್ಲಿ ನ್ಯಾಯಾಲಯವು ನಮ್ಮಮನವಿಯನ್ನು ಪರಿಗಣಿಸಿ ದಿನಾಂಕ 22.11.2025 ರಂದು ಮುಂದಿನ ವಿಚಾರಣೆಯವರೆಗೆ ದೇವಸ್ಥಾನದಲ್ಲಿ ಯಾವುದೇ ರೀತಿಯ ಇಲಾಖೆ ಅನುಮತಿ ಇಲ್ಲದೆ ಇರುವಂತಹ ಕೆಲಸ, ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆಗಳನ್ನು ನಡೆಸಲು ಮತ್ತು ನಿಯಮ ಬಾಹಿರ ಕೆಲಸಗಳು ಕಾಮಗಾರಿಗಳನ್ನು ಮಾಡದಂತೆ ಹಾಗೂ ಈಗಾಗಲೇ ಕರೆದಿರುವ ನಿಯಮ ಬಾಹಿರ ಟೆಂಡರ್ ಕೆಲಸಗಳನ್ನು ಮುಂದುವರೆಸದಂತೆ, ಅನುಮೋದನೆಯಾಗದ ಜೀರ್ಣೋದ್ಧಾರ ಸಮಿತಿಯ ಹೆಸರಿನಲ್ಲಿ ಕೆಲಸಗಳನ್ನು ಮಾಡಲು ಸಭೆಗಳನ್ನು ನಡೆಸಲು ಮಧ್ಯಂತರ ತಡೆಯಾಜ್ಞೆಯನ್ನು ನೀಡಿರುತ್ತದೆ ಮತ್ತು ಇಲಾಖಾ ನಿಯಮದ ಹಾಗೂ ಕಾನೂನಿಗೆ ವಿರುದ್ಧವಾದ ಯಾವುದೇ ಕಾಮಗಾರಿ ಮಾಡದಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಸರಕಾರಕ್ಕೆ ನಿರ್ದೇಶನ ನೀಡಿರುತ್ತದೆ ಎಂದು ತಿಳಿಸಿದರು.
ಈ ಮೇಲೆ ತಿಳಿಸಿರುವ ಪ್ರಕರಣದಲ್ಲಿ ದೂರುದಾರರಾದ ನಾನು ಹಾಗೂ ದಿನೇಶ್ ಜೈನ್ ಇವರು ದೇವಸ್ಥಾನದ ಆಡಳಿತ ಸಮಿತಿಯವರು ಕೆಲವೊಂದು ಇಲಾಖಾ ನಿಯಮವನ್ನು ಮೀರಿ ಮಾಡಿರುವಂತ ಕೆಲಸ ಕಾರ್ಯಗಳನ್ನು ಪ್ರಶ್ನಿಸಿದ್ದೇವೆ. ಅದೇ ರೀತಿ ದೇವಾಲಯದ ಆಡಳಿತದಲ್ಲಿ ನಡೆಸಿರುವಂತಹ ಇಲಾಖಾ ನಿಯಮಗಳನ್ನು ಮೀರಿ ಕೆಲಸ ಕಾರ್ಯಗಳನ್ನು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಅಧಿಕಾರ ಲೋಪವನ್ನು ಪ್ರಶ್ನಿಸಿ ಈ ಪ್ರಕರಣವನ್ನು ನಾವು ದಾಖಲು ಮಾಡಿರುತ್ತೇವೆ ಎಂದು ಹೇಳಿದರು.
ದೇವಸ್ಥಾನದಲ್ಲಿ ಅಭಿವೃದ್ಧಿ ಸಮಿತಿ ರಚನೆಯು ನಿಯಮಬಾಹಿರವಾಗಿದೆ. ಈ ಸಮಿತಿ ರಚನೆ ಮಾಡಿರುವುದು ಧಾರ್ಮಿಕ ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ಮಾಡಿರುವುದಿಲ್ಲ. ಇಲಾಖೆಯಿಂದ ಅನುಮೋದನೆಯಾಗದಿರುವ ಜೀರ್ಣೋದ್ದಾರ / ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ದೇವಸ್ಥಾನದ ಭಕ್ತರಿಂದ ಹಣ ಸಂಗ್ರಹಣೆ, ಕೆಲಸ ಕಾರ್ಯಗಳನ್ನು ನಡೆಸುವುದು, ಸಮಿತಿ ಹೆಸರಿನಲ್ಲಿ ಅನಧಿಕೃತ ಸಭೆಗಳನ್ನು ನಡೆಸುವುದು ಇವುಗಳೆಲ್ಲವೂ ಇಲಾಖಾ ನಿಯಮ ಮೀರಿದ ಕೆಲಸ. ಇಲಾಖೆಯಿಂದ ಅನುಮೋದನೆಯಾಗದಿರುವ ಜೀರ್ಣೋದ್ದಾರ / ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿರುವುದು, ಮತ್ತು ಅನಧಿಕೃತ ಟೆಂಡರ್ ಪ್ರಕಟಣೆಗಳನ್ನು ದಿನ ಪತ್ರಿಕೆಯಲ್ಲಿ ನೀಡದಿರುವುದು ನಿಯಮ ಬಾಹಿರ. ದೇವಸ್ಥಾನದ ಉತ್ತರ ಭಾಗದ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುವುದು, ಈ ರಸ್ತೆ ನಿರ್ಮಾಣ ಮಾಡಲು ಧಾರ್ಮಿಕ ದತ್ತಿ ಇಲಾಖೆಯಿಂದ ಪೂರ್ವಾನುಮತಿ ಪಡೆಯದೇ ಇರುವ ಬಗ್ಗೆ ಅಲ್ಲದೇ, ಈ ಬಗ್ಗೆ ಮೊದಲೇ ನ್ಯಾಯಾಲಯದಲ್ಲಿ ಬೇರೆ ಬೇರೆ ಪ್ರಕರಣಗಳು ಬಾಕಿ ಇರುವ ಸಂದರ್ಭದಲ್ಲಿ ಇದಕ್ಕೆ ತಡೆಯಾಜ್ಞೆಗಳು ಇದ್ದಾಗ ಇದನ್ನು ಮೀರಿ ಕೆಲಸಗಳನ್ನು ಮುಂದುವರೆಸಿರುವುದು ಕಾನೂನು ಮೀರಿದ ಕೆಲಸವಾಗಿರುತ್ತದೆ. ದೇವಸ್ಥಾನದ ಹೊರಾಂಗಣದಲ್ಲಿ ಹಳೆಯ 5 ಕಟ್ಟೆಗಳನ್ನು ತೆರವುಗೊಳಿಸಿ ಧಾರ್ಮಿಕ ಇಲಾಖಾ ಅನುಮತಿ ನಡೆಯದೇ ನೂತನವಾಗಿ ಶಿಲಾಮಯ ಕಟ್ಟಡ ಕಟ್ಟಿರುತ್ತಾರೆ. ಈ ಬಗ್ಗೆ ಅನಧಿಕೃತ ಹಣ ಸಂಗ್ರಹ ಮಾಡಿರುತ್ತಾರೆ
ಈ ನಿರ್ಮಾಣದ ಬಗ್ಗೆ ಯಾವುದೇ ಟೆಂಡರ್ ಪ್ರಕ್ರಿಯೆ ಮಾಡಿರುವುದಿಲ್ಲ. ನಿಯಮಾವಳಿಗಳನ್ನು ಪಾಲಿಸದೆ ಕಟ್ಟೆಗಳನ್ನು ನಿರ್ಮಾಣ ಮಾಡಿರುತ್ತಾರೆ. ದೇವಳಕ್ಕೆ ಸಂಭಂಧಿಸಿದ ನವಗ್ರಹ ಗುಡಿ, ಅಯ್ಯಪ್ಪ ಸನ್ನಿಧಿ ಹಾಗೂ ದೇವಾಲಯದ ನಟರಾಜ ವೇದಿಕೆ ಸಭಾಂಗಣ ತೆರವುಗೊಳಿಸುವ ಬಗ್ಗೆ ಸರಕಾರದ ನಿಯಮಗಳಡಿಯಲ್ಲಿ ಟೆಂಡರ್ ಪ್ರಕ್ರಿಯೆ, ಮೌಲ್ಯ ಮಾಪನ ಮಾಡದೇ ತೆರವುಗೊಳಿಸಿರುವುದು ಹಾಗೂ ಈ ಬಗ್ಗೆ ಸಮರ್ಪಕವಾದ ಇಲಾಖಾ ಅನುಮೋದನೆ ಪಡೆದುಕೊಂಡಿರುವುದಿಲ್ಲ. ದೇವಸ್ಥಾನದಲ್ಲಿ ಶ್ರೀ ದೇವರಿಗೆ ಚಿನ್ನದ ಮುಖವಾಡ ಮಾಡುವ ಬಗ್ಗೆ ಭಕ್ತಾಧಿಗಳಿಂದ ಕಾಣಿಕೆ ರೂಪದಲ್ಲಿ ಚಿನ್ನ ಸಂಗ್ರಹಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಸಮರ್ಪಕವಾದ ಇಲಾಖಾ ಅನುಮತಿಯನ್ನು ಆಗಮ ಪಂಡಿತರ ಅಭಿಪ್ರಾಯ ವರದಿಗಳನ್ನು ದೇವಳದಿಂದ ಪಡೆದಿರುವುದಿಲ್ಲ. ಇದರ ನಿರ್ವಹಣೆಯ ಬಗ್ಗೆ ದೇವಳದಲ್ಲಿ ಸರಿಯಾದ ಮಾಹಿತಿ ಇರುವುದಿಲ್ಲ. ಇದಲ್ಲದೆ ದೇವಾಲಯದಲ್ಲಿ ಸಮಿತಿ ನೇಮಕವಾದ ನಂತರ ನಡೆದಿರುವ ವಾರ್ಷಿಕ ಲೆಕ್ಕ ಪತ್ರಗಳಲ್ಲಿನ ಲೋಪದೋಷಗಳ ಬಗ್ಗೆ ಪ್ರಶ್ನಿಸಿಸಿದ್ದೇವೆ. ಈ ಎಲ್ಲಾ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಮಾಡಿದ ಕೆಲಸಗಳನ್ನು ಪ್ರಶ್ನಿಸಿ ನಾವು ನ್ಯಾಯಾಲಯಕ್ಕೆ ತನಿಖೆಯನ್ನು ಮಾಡಿ ಕಾನೂನಿನಡಿಯಲ್ಲಿ ಕೆಲಸ ನಿರ್ವಹಿಸಲು ಕೇಳಿಕೊಂಡು ಈ ಪ್ರಕರಣವನ್ನು ದಾಖಲು ಮಾಡಿರುತ್ತೇವೆ ಎಂದು ದಾಖಲೆಗಳ ಸಮೇತ ಗೋಷ್ಠಿಯಲ್ಲಿ ತಿಳಿಸಿದ್ದಾರೆ
ನಾವು ನ್ಯಾಯಾಲಯಕ್ಕೆ ನೀಡಿರುವ ದಾಖಲೆಗಳು ಹಾಗೂ ನಮ್ಮಮನವಿಯನ್ನು ಪರಿಗಣಿಸಿ ಉಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿರುತ್ತದೆ. ದೇವಸ್ಥಾನದಲ್ಲಿ ಮುಂದಿನ ವಿಚಾರಣೆಯವರೆಗೆ ಇಲಾಖಾ ನಿಯಮವನ್ನು ಮೀರಿ ಯಾವುದೇ ಕಾಮಗಾರಿಗಳನ್ನು ಮಾಡತಕ್ಕದ್ದಲ್ಲ ಹಾಗೂ ಇಲಾಖೆಯ ಅನುಮತಿ ಇಲ್ಲದೆ ಇರುವ ಎಲ್ಲಾ ಕೆಲಸ ಕಾರ್ಯಗಳು ಕಾಮಗಾರಿಗಳನ್ನು ನಡೆಸಲು ಹಾಗೂ ಅನುಮತಿ ಇಲ್ಲದಿರುವಂತಹ ಕಾಮಗಾರಿಗಳನ್ನು ಬೇರೆ ಹೆಸರಿನಲ್ಲಿ ಮಾರ್ಪಾಡು ಮಾಡಲು ಅಥವಾ ಮುಂದುವರಿಸಲು ಅವಕಾಶ ಇರುವುದಿಲ್ಲ. ಇಲಾಖಾ ಅನುಮತಿ ಇಲ್ಲದೆ ಟೆಂಡರ್ ನಿಯಮಗಳನ್ನು ಮೀರಿ ಯಾವುದೇ ಟೆಂಡರ್ ಕರೆಯಬಾರದು ಮತ್ತು ಈ ಮೊದಲೇ ಕರೆದಿರುವ ಟೆಂಡರ್ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕು. ಇಲಾಖಾ ನಿಯಮ ಹಾಗೂ ಕಾನೂನಿಗೆ ವಿರುದ್ಧವಾದ ಯಾವುದೇ ಕಾಮಗಾರಿ ಮಾಡದಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಸರಕಾರಕ್ಕೆ ಉಚ್ಚ ನ್ಯಾಯಾಲಯವು ನಿರ್ದೇಶನವನ್ನು ನೀಡಿರುತ್ತದೆ ಎಂದು ದೇವಸ್ಥಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ.
ದೇವಸ್ಥಾನದ ಅಭಿವೃದ್ಧಿಗೆ ನಮ್ಮವಿರೋಧವಿಲ್ಲ, ಬದಲಾಗಿ ದೇವಸ್ಥಾನವು ಇನ್ನಷ್ಟು ಅಭಿವೃದ್ಧಿ ಆಗಬೇಕು. ಭಕ್ತರಿಗೆ ಉತ್ತಮ ಸೌಲಭ್ಯಗಳು ದೊರೆಯಬೇಕು ಎಂಬುದು ನಮ್ಮ ಅಶಯ. ಅದರೆ ಅಭಿವೃದ್ಧಿ ಹೆಸರಿನಲ್ಲಿ ಇಲಾಖಾ ನಿಯಮಗಳನ್ನು ಮೀರಿ ಕಾನೂನಿನ ವಿರುದ್ಧವಾಗಿ ನಡೆಸುತ್ತಿರುವ ಕಾಮಗಾರಿಗಳು-ಕೆಲಸ ಕಾರ್ಯಗಳನ್ನು ನಾವು ಒಪ್ಪಲು ಸಾಧ್ಯವಿಲ್ಲ. ಅದರಿಂದ ನ್ಯಾಯಾಲಯವು ಏನು ಮಧ್ಯಂತರ ತಡೆಯಾಜ್ಞೆಯನ್ನು ಈ ಪ್ರಕರಣದಲ್ಲಿ ನೀಡಿದೆ, ಅದನ್ನು ಪ್ರತಿವಾದಿಗಳು ಗೌರವಿಸತಕ್ಕದ್ದು ಮತ್ತು ಅದರ ವ್ಯಾಪ್ತಿಗೊಳಪಡುವ ಯಾವುದೇ ಕಾಮಗಾರಿಗಳನ್ನು ಮುಂದುವರಿಸಬಾರದು. ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಪಾಲಿಸಬೇಕು. ಇಲಾಖೆ ನಿಯಮಗಳನ್ನು ಮೀರಿ ಮಾಡಿದಂತಹ ಕಾಮಗಾರಿಗಳನ್ನು ಆದೇಶ ವ್ಯಾಪ್ತಿಗೆ ಅನುಗುಣವಾಗಿ ಸ್ಥಗಿತಗೊಳಿಸಬೇಕು. ಅಭಿವೃದ್ಧಿಯನ್ನು ಇಲಾಖೆಯ ಕಾನೂನುಬದ್ಧ ಅನುಮೋದನೆ ಮತ್ತು ಪಾರದರ್ಶಕತೆಯ ಮೂಲಕ ನಡೆಸಬೇಕು.
ದೇವಸ್ಥಾನವನ್ನು ಗೊಂದಲದ ಗೂಡುಗಳಾಗಿ ಮಾಡದೆ ಪಾರದರ್ಶಕವಾಗಿ ಆಡಳಿತ ವ್ಯವಸ್ಥೆಯನ್ನು ನೀಡುವಂತಾಗಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ
























