ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿದ್ದ ‘ಕಟಾಕಟ್’ ಹೇಳಿಕೆಯನ್ನು ವ್ಯಂಗ್ಯವಾಡಿರುವ ಪ್ರಧಾನಿ ಮೋದಿ. ಜೂನ್ 4 ರ ಬಳಿಕ ಯುವರಾಜ ವಿದೇಶ ಪ್ರವಾಸಕ್ಕೆ ಓಡಿ ಹೋಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಜೂನ್ 4 ರ ಬಳಿಕ ಇಂಡಿ ಮೈತ್ರಿ ಕೂಟವು ‘ಕಟಾಕಟ್’ ಛಿದ್ರವಾಗಲಿದೆ ಎಂದಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಯುವ ರಾಜನಿಗೆ ಕಠಿಣ ಪರಿಶ್ರಮ ಹಾಗೂ ಫಲಿತಾಂಶದ ಬಗ್ಗೆ ಏನೂ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಿದ ರೀತಿಯಲ್ಲೇ ರಾಯ್ ಬರೇಲಿಯಲ್ಲೂ ಮತದಾರರು ರಾಹುಲ್ ಗಾಂಧಿ ಅವರನ್ನು ಸೋಲಿಸಲಿದ್ದಾರೆ ಎಂದು ಭವಿಷ್ಯ ನುಡಿದ ಪ್ರಧಾನಿ ಮೋದಿ, ಈ ದೇಶದ ಆಡಳಿತ ಚುಕ್ಕಾಣಿ ಹಿಡಿಯೋದು ಮಕ್ಕಳ ಆಟವಲ್ಲ ಎಂದರು. ಹುಟ್ಟಿನಿಂದಲೇ ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಹುಟ್ಟಿದವರಿಗೆ ಇದು ಗೊತ್ತಾಗೋದಿಲ್ಲ ಎಂದೂ ಪ್ರಧಾನಿ ಮೋದಿ ಕಿಡಿ ಕಾರಿದರು
ಜೂನ್ 4 ರಂದು 2024ರ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಇಂಡಿ ಮೈತ್ರಿ ಕೂಟದಲ್ಲಿ ಈ ಸೋಲಿನ ಹೊಣೆಯನ್ನು ಯಾರ ತಲೆಗೆ ಕಟ್ಟೋದು ಎಂಬ ಚಿಂತೆ ಶುರುವಾಗುತ್ತದೆ. ಎಲ್ಲರೂ ತಲೆದಂಡಕ್ಕಾಗಿ ಬಲಿಪಶು ಒಬ್ಬರನ್ನು ಹುಡುಕುತ್ತಾರೆ. ಲಖನೌ ಯುವರಾಜ ಅಖಿಲೇಶ್ ಯಾದವ್ ಹಾಗೂ ದಿಲ್ಲಿಯ ಯುವ ರಾಜ ರಾಹುಲ್ ಗಾಂಧಿ ದೇಶ ಬಿಟ್ಟು ವಿದೇಶಗಳಿಗೆ ಪ್ರವಾಸಕ್ಕಾಗಿ ಹಾರುತ್ತಾರೆ. ಬೇಸಿಗೆ ರಜೆ ಮುಗಿಸಿಕೊಂಡು ವಾಪಸ್ ಬರ್ತಾರೆ. ಎಲ್ಲವೂ ಕಟಾಕಟ್ ಎಂದು ಆಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ಮೋದಿ ಅವರ ಭಾಷಣದಲ್ಲಿ ಕರ್ನಾಟಕದಲ್ಲಿ ಒಬಿಸಿ ಮೀಸಲಾತಿ ಅಡಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿದ ವಿಚಾರವನ್ನೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಕಾಂಗ್ರೆಸ್ ಪಕ್ಷವು ದೇಶದಲ್ಲಿ ಸಂವಿಧಾನ ಬದಲಿಸಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಸಮಾಜವಾದಿ ಪಕ್ಷವು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದರು. ಅಷ್ಟೇ ಅಲ್ಲ, ವೋಟ್ ಜಿಹಾದ್ ನಡೆಯುತ್ತಿದೆ ಎಂದೂ ಪ್ರಧಾನಿ ಮೋದಿ ಆಕ್ರೋಶ ಹೊರ ಹಾಕಿದ್ದಾರೆ.