ನವದೆಹಲಿ: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಯಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವುದು ಕಾಯ್ದೆಯ ಉದ್ದೇಶವಾಗಿದ್ದು, ಕೇಂದ್ರ ಸರ್ಕಾರವು 300 ಜನರಿಗೆ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರ ಭಾಗವಾಗಿಯೇ 14 ಜನರಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಲಾಗಿದೆ. ಹೀಗೆ, ಪಾಕಿಸ್ತಾನದಲ್ಲಿ ಬಹುಸಂಖ್ಯಾತರಿಂದ ಸಂಕಷ್ಟ ಅನುಭವಿಸಿ, ಭಾರತಕ್ಕೆ ಬಂದು ನೆಲೆಸಿದ ಹಿಂದುಗಳಿಗೆ ಪೌರತ್ವ ದೊರೆತಿದ್ದು, ಅವರ ಇಡೀ ಕುಟುಂಬವು ಸಂತಸ ವ್ಯಕ್ತಪಡಿಸಿದೆ.
ಹೌದು, ಪಾಕಿಸ್ತಾನದಿಂದ ಬಂದು, ದೆಹಲಿಯ ಆದರ್ಶ ನಗರದಲ್ಲಿ ವಾಸಿಸುತ್ತಿರುವ ಹಲವರಿಗೆ ಭಾರತದ ಪೌರತ್ವ ನೀಡಲಾಗಿದ್ದು, ಅವರೀಗ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಹಾಗೂ ಮಕ್ಕಳು ಸೇರಿ ಹಲವರು ಭಾರತದ ಪೌರತ್ವ ಹಿಡಿದಿರುವ ವಿಡಿಯೊ ಈಗ ಭಾರಿ ವೈರಲ್ ಆಗಿದೆ. “ಪಾಕಿಸ್ತಾನದಲ್ಲಿ ಹಿಂದು ಹೆಣ್ಣುಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಹಿಂದು ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಬಿಡಿ, ಮನೆಯಿಂದಲೂ ಹೊರಗೆ ಬರಲು ಆಗುವುದಿಲ್ಲ. ಮುಸ್ಲಿಮರು ಹಿಂದು ಹೆಣ್ಣುಮಕ್ಕಳನ್ನು ಅಪಹರಣ ಮಾಡುತ್ತಾರೆ. ಬಲವಂತವಾಗಿ ಮತಾಂತರ ಮಾಡುತ್ತಾರೆ, ಕಿರುಕುಳ ನೀಡುತ್ತಾರೆ. ಈಗ ಭಾರತದ ಪೌರತ್ವ ಸಿಕ್ಕಿರುವುದು ಖುಷಿಯಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಧನ್ಯವಾದಗಳು” ಎಂದು ಸಿಎಎ ಅಡಿಯಲ್ಲಿ ಪೌರತ್ವ ಪಡೆದ ಭಾವನಾ ತಿಳಿಸಿದ್ದಾರೆ.
2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.
ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ
ಸಿಎಎಗೆ 2019 ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ.