ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದು, ಬಿಜೆಪಿ ಸ್ವತಂತ್ರವಾಗಿ ಕೇಂದ್ರದಲ್ಲಿ ಸರ್ಕಾರ ರಚಿಸುವ ಕನಸು ಮಂಕಾಗಿದೆ. ಈಗ ಬಿಜೆಪಿ ತನ್ನ ಮಿತ್ರಪಕ್ಷಗಳನ್ನೇ ನೆಚ್ಚಿಕೊಳ್ಳಬೇಕಿದ್ದು, ಎನ್‌ಡಿಎ ಮಿತ್ರಪಕ್ಷಗಳು ಕೂಡ ಆಟವಾಡುವ ಸಾಧ್ಯತೆ ಕಾಣಿಸಿದೆ. ಮುಖ್ಯವಾಗಿ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಾರ್ಟಿ ಹಾಗೂ ಬಿಹಾರದ ನಿತೀಶ ಕುಮಾರ್ ಕಿಂಗ್ ಮೇಕರ್‌ಗಳಾಗಲಿದ್ದಾರೆ. ಫಲಿತಾಂಶ ಗಮನಿಸಿ ಇಂಡಿಯಾ ಮೈತ್ರಿಕೂಟ ಕೂಡ ಚುರುಕಾಗಿದ್ದು, ಇವರಿಬ್ಬರನ್ನು ಸೆಳೆದು ಸರ್ಕಾರ ರಚಿಸಲು ಪ್ಲಾನ್ ರೂಪಿಸುತ್ತಿದೆ.
ಸದ್ಯ 527 ಸ್ಥಾನಗಳ ಟ್ರೆಂಡ್ ಗೊತ್ತಾಗಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 283 ಸ್ಥಾನಗಳಲ್ಲಿ ಮುಂದಿದ್ದರೆ, ಇಂಡಿಯಾ ಒಕ್ಕೂಟ 221 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 23 ಸ್ಥಾನಗಳಲ್ಲಿ ಮುಂದಿದ್ದಾರೆ. ಟ್ರೆಂಡ್‌ಗಳ ಆಧಾರದ ಮೇಲೆ ಎನ್‌ಡಿಎ 300 ಸೀಟುಗಳಿಗಿಂತ ಕೆಳಗಿಳಿಯಬಹುದು. ಬಿಜೆಪಿ ಒಂದು ಕ್ಷೇತ್ರದಲ್ಲಿ ಈಗಾಗಲೇ ಗೆಲುವು ಸಾಧಿಸಿದ್ದು, 238 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಆದರೆ 543 ಸದಸ್ಯರ ಲೋಕಸಭೆಯಲ್ಲಿ ಬಹುಮತ ಗಳಿಸಲು 272 ಸೀಟು ಬೇಕು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 303 ಸ್ಥಾನಗಳನ್ನು ಗೆದ್ದಿದ್ದರೆ, ಎನ್‌ಡಿಎ 353 ಸ್ಥಾನಗಳನ್ನು ಪಡೆದಿತ್ತು.
ಈ ಪರಿಸ್ಥಿತಿಯಲ್ಲಿ ಜನತಾ ದಳ ಯುನೈಟೆಡ್ (ಜೆಡಿಯು) ಮುಖ್ಯಸ್ಥ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಪ್ರಮುಖರಾಗುತ್ತಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಈ ಇಬ್ಬರು ನಾಯಕರ ಕೃಪೆಯಿಂದ ನಡೆಯಬೇಕಿದ್ದು, ನಿತೀಶ್ ಮತ್ತು ನಾಯ್ಡು ಕಿಂಗ್‌ಮೇಕರ್ ಆಗಲಿದ್ದಾರೆ. ಏಕೆಂದರೆ ಅವರಿಬ್ಬರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಯಾವಾಗ ಬೇಕಾದರೂ ಮೈತ್ರಿ ಬದಲಾಯಿಸುವ ಇತಿಹಾಸವನ್ನು ಹೊಂದಿದ್ದಾರೆ.
ಬಿಹಾರದ 40 ಸ್ಥಾನಗಳ ಪೈಕಿ ಜೆಡಿಯು 15ರಲ್ಲಿ ಮುನ್ನಡೆ ಸಾಧಿಸಿದ್ದರೆ, ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳಲ್ಲಿ 16ರಲ್ಲಿ ಟಿಡಿಪಿ ಮುನ್ನಡೆ ಸಾಧಿಸಿದೆ. ಎರಡೂ ಪಕ್ಷಗಳು ಪ್ರಸ್ತುತ NDAಯಲ್ಲಿವೆ. ಆದರೆ ಇವರಿಬ್ಬರೂ ಹಿಂದೆ ಮಾಡಿದಂತೆ ಮೈತ್ರಿ ಬದಲಾಯಿಸಿದರೆ ಸನ್ನಿವೇಶ ಉಲ್ಟಾ ಹೊಡೆಯುತ್ತದೆ. ನಾಯ್ಡು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ.
ಇಂಡಿಯಾ ಮೈತ್ರಿಕೂಟದ ಮುಖಂಡರು ಈಗಾಗಲೇ ಈ ಇಬ್ಬರೂ ನಾಯಕರನ್ನು ಸಂಪರ್ಕಿಸುವ ಕಾರ್ಯವನ್ನು ಶುರು ಮಾಡಿದ್ದಾರೆ. ಇಂಡಿ ನಾಯಕರೊಂದಿಗೂ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿರುವ ಈ ಇಬ್ಬರೂ ನಾಯಕರು, ಅಧಿಕಾರ ಹಂಚಿಕೆಯ ವಿಚಾರದಲ್ಲಿ ಉತ್ತಮ ಆಫರ್ ಬಂದರೆ ಅತ್ತ ಕಡೆ ಜಿಗಿಯುವ ಸಾಧ್ಯತೆ ಸ್ಪಷ್ಟವಾಗಿದೆ.