ರಾಜ್ಯದಲ್ಲಿ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ವಿವಾದದ ನಡುವೆಯೇ ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ವಿರುದ್ಧದ ಯಾವುದೇ ಮಾನಹಾನಿಕಾರಕ ವಿಷಯಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸೋಮವಾರ(ಅ. 12) ಬೆಂಗಳೂರಿನ 18ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ತಮ್ಮ ವಕೀಲ ಪ್ರವೀಣ್ ಕಾಮತ್ ಮೂಲಕ ಮಾಜಿ ಸಿಎಂ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ವಿವಾದಿತ ವಿಡಿಯೋ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಹಂಚಿಕೊಳ್ಳದಂತೆ ಮತ್ತು ಪ್ರಸಾರ ಮಾಡದಂತೆ ಅರ್ಜಿಯಲ್ಲಿ ಕೋರಿದ್ದಾರೆ.
ಅರ್ಜಿಯಲ್ಲಿ ನ್ಯೂಸ್ ಚಾನಲ್ಗಳು, ಪತ್ರಿಕೆಗಳು ಸೇರಿದಂತೆ 42 ಮಾಧ್ಯಮ ಸಂಸ್ಥೆಗಳನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ. ಇಂದು ಅರ್ಜಿಯ ವಿಚಾರಣೆ ನಡೆಯಲಿದ್ದು ನ್ಯಾಯಾಲಯ ತನ್ನ ಆದೇಶ ನೀಡುವ ಸಾಧ್ಯತೆಯಿದೆ.
ಸೋಮವಾರ ತಡರಾತ್ರಿ ಈ ಕುರಿತು ಮಾತನಾಡಿರುವ ಸಿದ್ದರಾಮಯ್ಯನವರು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಅದಕ್ಕೆ ತಡೆಯಾಜ್ಞೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಸ್ಟೇ ಮಾತ್ರವಲ್ಲ, ಸುಳ್ಳು ವಿಡಿಯೋ ಹರಿಬಿಡುತ್ತಿರುವವರ ವಿರುದ್ಧ ಕೇಸ್ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

























