ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ವಳಾಲು ಪಡ್ಡು ಟೋಲ್ ಪ್ಲಾಜಾದಲ್ಲಿ ದುಬಾರಿ ಶುಲ್ಕ ಸಂಗ್ರಹಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಟೋಲ್ ಶುಲ್ಕ ಸಂಗ್ರಹವನ್ನು ಖಂಡಿಸಿ ಶುಕ್ರವಾರ ರೈತಸಂಘ ಹಸಿರುಸೇನೆಯ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ಹಾಗೂ ಕಾರ್ಮಿಕ ಮುಖಂಡ, ನ್ಯಾಯವಾದಿ ಬಿ.ಎಂ. ಭಟ್ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾಕಾರರು ಟೋಲ್ ಗೇಟ್ಗಳನ್ನು ತೆರೆಯಿಸಿ ಎಲ್ಲಾ ವಾಹನಗಳಿಗೂ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟೋಲ್ ಸಂಗ್ರಹ ಆರಂಭಿಸಿರುವುದು ಹಾಗೂ ಸ್ಥಳೀಯರೊಂದಿಗೆ ಯಾವುದೇ ಚರ್ಚೆ ನಡೆಸದೆ ಶುಲ್ಕ ವಿಧಿಸುತ್ತಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಟೋಲ್ ಸಂಗ್ರಹವನ್ನು ತಕ್ಷಣ ಸ್ಥಗಿತಗೊಳಿಸಬೇಕು. ಜಿಲ್ಲಾಧಿಕಾರಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸ್ಥಳೀಯರ ಸಭೆ ನಡೆಸಿದ ಬಳಿಕವಷ್ಟೇ ಶುಲ್ಕ ಸಂಗ್ರಹ ಆರಂಭಿಸಬೇಕು. ಬಜತ್ತೂರು ಸೇರಿದಂತೆ ನಿರಂತರವಾಗಿ ಸಂಚರಿಸುವ ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಒಂದು ವಾರದ ಗಡುವು ನೀಡಿದ ಪ್ರತಿಭಟನಾಕಾರರು, ಬೇಡಿಕೆಗಳಿಗೆ ಸ್ಪಂದಿಸದಿದ್ದರೆ 3 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಟೋಲ್ ಬಂದ್ ಮಾಡುವ ಎಚ್ಚರಿಕೆ ನೀಡಿದರು. ನಿಗದಿತ ಸಮಯಕ್ಕೆ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಟೋಲ್ ಗೇಟ್ಗಳನ್ನು ತೆರೆಯಲಾಯಿತು. ಸಂಜೆವರೆಗೂ ಶುಲ್ಕ ಸಂಗ್ರಹ ನಡೆಯದಂತೆ ಪ್ರತಿಭಟನಾಕಾರರು ನಿಗಾ ವಹಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದು, ಉಪ್ಪಿನಂಗಡಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರ

























