ಉಳ್ಳಾಲ: ನಟೋರಿಯಸ್ ರೌಡಿ ಶೀಟರ್ ಉಳ್ಳಾಲದ ಕಡಪ್ಪಾರ ಸಮೀರ್ನನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿದ್ದು, ದುಷ್ಕರ್ಮಿಗಳ ಅಟ್ಟಹಾಸಕ್ಕೆ ಮಂಗಳೂರು ಬೆಚ್ಚಿ ಬಿದ್ದಿದೆ. ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸಮೀರ್ನನ್ನು ದುಷ್ಕರ್ಮಿಗಳ ತಂಡವೊಂದು ಅಟ್ಟಾಡಿಸಿಕೊಂಡು ತಲವಾರಿನಿಂದ ಕಡಿದು ಹತ್ಯೆ ಮಾಡಿದೆ. ಈ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಎಂಬಲ್ಲಿ ಭಾನುವಾರ (ಆಗಸ್ಟ್ 11) ರಾತ್ರಿ ನಡೆದಿದೆ.
ಸಮೀರ್ ಕಾರಿನಲ್ಲಿ ತಾಯಿ ಮತ್ತು ಕುಟುಂಬದ ಸದಸ್ಯರೊಂದಿಗೆ ಕಲ್ಲಾಪುವಿನ ರೆಸ್ಟೋರೆಂಟ್ಗೆ ಊಟಕ್ಕೆಂದು ಆಗಮಿಸಿದ್ದ ವೇಳೆ ತಂಡ ದಾಳಿ ನಡೆಸಿದೆ. ಸಮೀರ್ನನ್ನು ಹಿಂಬಾಲಿಸಿಕೊಂಡು ಬಂದಿದ್ದ ತಂಡ ತಲವಾರಿನಿಂದ ಹಲ್ಲೆ ನಡೆಸಿದೆ. ಕೂಡಲೇ ತಪ್ಪಿಸಿಕೊಳ್ಳಲು ಸಮೀರ್ ಸ್ಥಳದಿಂದ ಓಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಐವರಿದ್ದ ತಂಡ ಆತನನ್ನು ಅಟ್ಟಾಡಿಸಿಕೊಂಡು ಹೋಗಿ ತಲವಾರಿನಿಂದ ಕಡಿದು ಹತ್ಯೆ ಮಾಡಿದೆ. ಸದ್ಯ ಹತ್ಯೆ ನಡೆಸಿ ಪರಾರಿಯಾದ ಗುಂಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇತ್ತೀಚೆಗೆ ಮಂಗಳೂರು ಕಾರಾಗೃಹದಲ್ಲಿ ಸಮೀರ್ ಮೇಲೆ ಸಹ ಕೈದಿಗಳಿಂದ ದಾಳಿ ನಡೆದಿತ್ತು. ವಾರದ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಆತ ಹೊರ ಬಂದಿದ್ದ. ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. 2018ರಲ್ಲಿ ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್ನನ್ನು ಜೆಪ್ಪುವಿನ ಫ್ಲ್ಯಾಟ್ ಒಂದರಲ್ಲಿ ಇದೀಗ ಕೊಲೆಯಾದ ಶಮೀರ್, ದಾವುದ್, ರಿಯಾಝ್, ಅಬ್ದುಲ್ ಖಾದರ್, ಉಮ್ಮರ್ ನವಾಫ್, ಮೊಹಮ್ಮದ್ ನಝೀರ್, ನೌಷಾದ್, ಅಝ್ಗರ್ ಆಲಿ ಮತ್ತಿತರರು ಸೇರಿ ಹತ್ಯೆ ನಡೆಸಿದ್ದರು.