ಬೆಂಗಳೂರು: ಡಿಫೆಂಡಿಂಗ್ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಎದುರು 27 ರನ್‌ಗಳ ಭರ್ಜರಿ ಜಯ ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇ ಆಫ್ಸ್ ಹಂತಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 18) ನಡೆದ ಹೈ ವೋಲ್ಟೇಜ್ ಪಂದ್ಯಕ್ಕೆ ಕೆಲ ಸಮಯ ಮಳೆ ಅಡ್ಡಿ ಪಡಿಸಿದರೂ, ಸಿಎಸ್‌ಕೆ ಅಭಿಮಾನಿಗಳ ನಿದ್ದೆ ಕೆಡುವಂತ ಆಟವಾಡಿದ ಆರ್‌ಸಿಬಿ ಸ್ಮರಣೀಯ ಜಯ ದಾಖಲಿಸಿತು. ಐಪಿಎಲ್ 2024 ಟೂರ್ನಿಯಲ್ಲಿ ಸತತ 6 ಪಂದ್ಯ ಗೆದ್ದ ಏಕಮಾತ್ರ ತಂಡವಾಗಿ ಚಾಲೆಂಜರ್ಸ್ ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿದೆ.
ಫೀನಿಕ್ಸ್ ಪಕ್ಷಿಯಂತೆ ಪುಟಿದೆದ್ದ ಆರ್‌ಸಿಬಿ ಈಗ ಅಂಕಪಟ್ಟಿಯ 4ನೇ ಸ್ಥಾನ ಪಡೆದು, ಪ್ಲೇ ಆಫ್ಸ್ ರೇಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೊರದಬ್ಬಿದೆ. ಮೇ 24ರಂದು ಪ್ಲೇ-ಆಫ್ಸ್ ಹಂತದ ಎರಡನೇ ಹಣಾಹಣಿ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಆರ್‌ಸಿಬಿಗೆ ಎದುರಾಳಿ ಯಾರು ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ , ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇ ಆಫ್ಸ್ ತಲುಪಿರುವ ತಂಡಗಳಾಗಿವೆ. ಇದರಲ್ಲಿ ಅಂಕಪಟ್ಟಿಯ 2ನೇ ಮತ್ತು 3ನೇ ಸ್ಥಾನದಲ್ಲಿರುವ ಆರ್‌ಆರ್ ಮತ್ತು ಎಸ್‌ಆರ್‌ಎಚ್ ತಂಡಗಳು ಲೀಗ್ ಹಂತದಲ್ಲಿ ತಮ್ಮ ಕೊನೇ ಪಂದ್ಯಗಳನ್ನು ಆಡುವುದು ಬಾಕಿಯಿದೆ. ಆ ಪಂದ್ಯಗಳ ಫಲಿತಾಂಶದ ಬಳಿಕ ಯಾವ ತಂಡಗಳು ವಾಯ ಸ್ಥಾನ ಪಡೆಯಲಿವೆ ಎಂದು ಸ್ಪಷ್ಟವಾಗಲಿವೆ. ಆಗ ಮಾತ್ರ ಆರ್‌ಸಿಬಿಗೆ ಮುಂದಿನ ಎದುರಾಳಿ ಯಾರೆಂಬುದು ಸ್ಪಷ್ಟವಾಗಲಿದೆ. ಮೇಲ್ನೋಟಕ್ಕೆ ಆರ್‌ಸಿಬಿಗೆ ಆರ್‌ಆರ್ ಅಥವಾ ಎಸ್‌ಆರ್‌ಎಚ್ ತಂಡಗಳ ಸವಾಲು ಎದುರಾಗಲಿದೆ. ಅಗ್ರಸ್ಥಾನ ಕೆಕೆಆರ್‌ಗೆ ಖಾತ್ರಿಯಾಗಿದ್ದು, 4ನೇ ಸ್ಥಾನ ಆರ್‌ಸಿಬಿಗೆ ಒಲಿದೆ. ಈಗ ಅಂಕಪಟ್ಟಿಯಲ್ಲಿ 2ನೇ ಮತ್ತು 3ನೇ ಸ್ಥಾನಕ್ಕಾಗಿ ಆರ್‌ಆರ್ ಮತ್ತು ಎಸ್‌ಆರ್‌ಎಚ್ ನಡುವೆ ಪೈಪೋಟಿಯಿದೆ.