ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ನಡೆದ ಭೂಕುಸಿತ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿರುವ ಅನಧಿಕೃತ ಹೋಂ ಸ್ಟೇ, ರೆಸಾರ್ಟ್‌ಗಳನ್ನು ತೆರವುಗೊಳಿಸಲು ಮುಂದಾಗಿದೆ. ಇದೀಗ ಎಲ್ಲ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ / ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿರುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಭೂ ದಾಖಲೆ) ವಸ್ತು ನಿಷ್ಠ ಮಾಹಿತಿಯನ್ನು ಕೂಡಲೇ ಸಲ್ಲಿಸುವಂತೆ ಸೂಚಿಸಿದ್ದಾರೆ.

ಜಾಹೀರಾತು
ಈ ಸಂಬಂಧ ಕೆಲವು ದಿನಗಳ ಹಿಂದೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸುತ್ತೋಲೆ ಹೊರಡಿಸಿದ್ದು, ಪಶ್ಚಿಮ ಘಟ್ಟದಲ್ಲಿ 2015ರಿಂದ ಈಚೆಗೆ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಇದೀಗ ಎಲ್ಲ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ / ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿರುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಭೂ ದಾಖಲೆ) ವಸ್ತು ನಿಷ್ಠ ಮಾಹಿತಿಯನ್ನು ಕೂಡಲೇ ಸಲ್ಲಿಸುವಂತೆ ಸೂಚಿಸಿದ್ದಾರೆ.
2015ರ ನಂತರದಲ್ಲಿ ರಾಜ್ಯದ ಪಶ್ಚಿಮ ಘಟ್ಟ ಮತ್ತು ಇತರ ಘಟ್ಟ ಪ್ರದೇಶದಲ್ಲಿ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ರೆಸಾರ್ಟ್, ಹೋಂ ಸ್ಟೇ, ತೋಟ, ಬಡಾವಣೆ ಹಾಗೂ ಇನ್ನಿತರ ಅರಣ್ಯ ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವೈಯಕ್ತಿಕ ಗಮನ ಹರಿಸಿ ಪರಿಶೀಲಿಸಿ ವಸ್ತು ನಿಷ್ಠ ಮಾಹಿತಿಯನ್ನು ಕೂಡಲೇ ಸಲ್ಲಿಸಲು ನೀಡಿರುವ ನಿರ್ದೇಶನಗಳನ್ನು ಪುನರುಚ್ಚರಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸ್ವಾಭಾವಿಕ, ಪ್ರಕೃತಿ ದತ್ತವಾದ ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಶೋಲಾ ಅರಣ್ಯಗಳ ತಲೆ ಕಡಿದು ಕಾಫಿ ತೋಟ, ಮನೆ, ಹೋಂಸ್ಟೇ, ರೆಸಾರ್ಟ್ ಮಾಡುತ್ತಿರುವುದರಿಂದ ಹಾಗೂ ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿಡುವ ಬೃಹತ್ ಮರಗಳ ಕಡಿತಲೆ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಇಂತಹ ದುರಂತ ಮರುಕಳಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಜಾಹೀರಾತು

ಜಾಹೀರಾತು
ಗಿರಿ ಮತ್ತು ಘಟ್ಟ ಪ್ರದೇಶದಲ್ಲಿ ವಿಪರೀತವಾಗಿ ವಾಹನಗಳ ಸಂಚಾರದಿಂದಲೂ ಅಪಾಯ ಎದುರಾಗುತ್ತಿದೆ. ವಾರಾಂತ್ಯದಲ್ಲಿ ಪ್ರವಾಸ, ಚಾರಣದ ಹೆಸರಲ್ಲಿ ಗಿರಿ ಮತ್ತು ಕಾನನ ಪ್ರದೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುವುದೂ ಇಂತಹ ದುರಂತಗಳಿಗೆ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟದಲ್ಲಿ 2015ರಿಂದೀಚೆಗೆ ಪಶ್ಚಿಮ ಘಟ್ಟದ ಎಲ್ಲ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ್ದ ಸಚಿವ ಈಶ್ವರ್ ಖಂಡ್ರೆ, ʼʼರಾಜ್ಯದ ಪಶ್ಚಿಮ ಘಟ್ಟಗಳಲ್ಲಿ 2015ರ ನಂತರ ಅರಣ್ಯ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಿಸಿರುವ ಹೋಮ್ ಸ್ಟೇ , ರೆಸಾರ್ಟ್ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಕೃತಿ ವಿಕೋಪದಿಂದ ಆಗುತ್ತಿರುವ ಅನಾಹುತಗಳನ್ನು ನೋಡುತ್ತಿದ್ದೇವೆ. ಕೇರಳದಲ್ಲಿ ಆದ ಘಟನೆಯಿಂದ ನಾಲ್ಕೈದು ಹಳ್ಳಿ ನಾಪತ್ತೆಯಾಗಿ ನೂರಾರು ಜನರು ಸಾವಿಗೀಡಾಗಿದ್ದಾರೆ. ವಿಶೇಷವಾಗಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ರಸ್ತೆ ಮಾಡುತ್ತಾರೆ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸುತ್ತಾರೆ. ಇವುಗಳಿಂದ ಅನಾಹುತ ಆಗುತ್ತದೆ. ಮೊದಲು ಕೃಷಿ ಚಟುವಟಿಕೆಗಳನ್ನು ಶುರುಮಾಡಿ ನಂತರ ರೆಸಾರ್ಟ್ ಮಾಡುತ್ತಾರೆ. ಹೀಗಾಗಿ ಅನಧಿಕೃತ ಹೋಂ ಸ್ಟೇ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆʼʼ ಎಂದು ತಿಳಿಸಿದ್ದರು.